ಕುತ್ತಾರು ಮೇ 7: ಮುನ್ನೂರು ಗ್ರಾಮದ ಕುತ್ತಾರು ಪ್ರದೇಶದ ಕಂಪ ಮನೆತನದ ದೇವಪ್ಪ ಕಂಪ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸರಳ ಸ್ವಭಾವ, ಸಹನಶೀಲತೆ ಹಾಗೂ ಸ್ನೇಹಪರ ನಡೆನುಡಿಗಳಿಂದ ದೇವಪ್ಪ ಕಂಪ ಅವರು ಎಲ್ಲರಿಗೂ ಚಿರಪರಿಚಿತರಾಗಿದ್ದರು. ಸಮಾಜದಲ್ಲಿ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದ ಅವರು ಜನಸೇವೆಯಲ್ಲಿ ಸದಾ ತೊಡಗಿಸಿಕೊಂಡಿದ್ದರು.
ಸಿಪಿಎಂ ಪಕ್ಷದ ಹಿತೈಷಿಯಾಗಿ ಕಾರ್ಯನಿರ್ವಹಿಸಿದ್ದ ದೇವಪ್ಪ ಕಂಪ ಅವರು ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಕಾರ್ಯಕರ್ತರಿಗಿಂತಲೂ ಹೆಚ್ಚು ಸಮರ್ಪಣಾಭಾವದಿಂದ ಪಕ್ಷದ ಹೋರಾಟ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಪಕ್ಷದ ಆಶಯಗಳ ಬಗ್ಗೆ ಅಪಾರವಾದ ಅಭಿಮಾನ ಹೊಂದಿದ್ದ ಅವರು ಪ್ರತಿಯೊಂದು ಹೋರಾಟ ಕಾರ್ಯಕ್ರಮದಲ್ಲೂ ತಮ್ಮ ಹಾಜರಾತಿ ನೀಡುತ್ತಿದ್ದರು.
ಇದಲ್ಲದೆ, ಈ ಭಾಗದ ಸಾಮಾಜಿಕ ಸಂಸ್ಥೆಗಳಾದ ಶ್ರೀ ಜೈ ಹನುಮಾನ್ ಕ್ರೀಡಾ ಮಂಡಳಿ ಹಾಗೂ ಮುನ್ನೂರು ಯುವಕ ಮಂಡಳಿಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.
ಡಿ.ವೈ.ಎಫ್.ಐ ಹಾಗೂ ರೈತ ಸಂಘದ ಸಮಿತಿ ಸದಸ್ಯರಾಗಿ ಸಾಮಾಜಿಕ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದ ದೇವಪ್ಪ ಕಂಪ ಅವರು ಪ್ರಸ್ತುತ ಮುನ್ನೂರು ಗ್ರಾಮ ಪ್ರಾಂತ ರೈತ ಸಂಘದ ಸಮಿತಿ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ರೈತರ ಭೂಸುಧಾರಣ ಕಾಯ್ದೆ ಜಾರಿಗೆ ನಡೆದ ಮಹತ್ವದ ಹೋರಾಟದ ಸಂದರ್ಭದಲ್ಲಿ ಅತೀ ಚಿಕ್ಕ ವಯಸ್ಸಿನಲ್ಲೇ ಮಂಗಳೂರಿನಿಂದ ಬೆಂಗಳೂರಿನವರೆಗೆ ನಡೆದ ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಿ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದರು.
ಗ್ರಾಮ ರೈತ ಸಂಘದ ಸದಸ್ಯತ್ವ ಅಭಿಯಾನ ನಡೆದಾಗ ಗ್ರಾಮದ ಪ್ರತಿಯೊಂದು ಪ್ರದೇಶಕ್ಕೂ ಭೇಟಿ ನೀಡಿ ಸಂಘಟನೆ ಬಲಪಡಿಸುವ ಕಾರ್ಯದಲ್ಲಿ ಅವರು ಸದಾ ಮುಂಚೂಣಿಯಲ್ಲಿದ್ದರು.
ದೇವಪ್ಪ ಕಂಪ ಅವರ ಅಗಲಿಕೆ ಮುನ್ನೂರು ಗ್ರಾಮದ ಜನತೆಗೆ ಮಾತ್ರವಲ್ಲದೆ, ರೈತ ಚಳುವಳಿಗೆ ಹಾಗೂ ಸಾಮಾಜಿಕ ಕ್ಷೇತ್ರಕ್ಕೂ ಅಪಾರ ನಷ್ಟವಾಗಿದೆ. ಅವರ ಸೇವಾ ಮನೋಭಾವ ಮತ್ತು ಸಂಘಟನಾ ಚಟುವಟಿಕೆಗಳು ಸದಾ ಸ್ಮರಣೀಯವಾಗಿರಲಿವೆ.