ಮಂಗಳೂರು: ಪ್ರತಿಯೊಬ್ಬ ಮಹಿಳೆಯೂ ಸ್ವಾವಲಂಬಿಯಾಗಿ ಬದುಕುವಂತಾಗಬೇಕು ಎಂಬ ಆಶಯದೊಂದಿಗೆ ಕಾರ್ಯಾಚರಿಸುತ್ತಿರುವ ವಿಆರ್ ಡಿಎಫ್ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಕಳೆದ 36 ವರ್ಷಗಳಿಂದ ಯಶಸ್ವಿ ಹೆಜ್ಜೆಗಳನ್ನು ಇಡುತ್ತಾ ಬಂದಿದೆ. ಇದೀಗ ಶಿವಮೊಗ್ಗ ಹಾಗೂ ಹಾಸನ ವಿಸ್ತರಣೆಗೆ ಮುಂದಾಗಿದೆ. ಗ್ರಾಮೀಣ ಮಟ್ಟದಿಂದಲೇ ಅಭಿವೃದ್ಧಿ ಕಾರ್ಯಗಳು, ಜ್ಞಾನ ವೃದ್ಧಿ ಹಾಗೂ ಸಮಾಜ ಸೇವೆಯ ಕೆಲಸಗಳಾಗಬೇಕು ಅನ್ನುವ ಉದ್ದೇಶದೊಂದಿಗೆ ಕಾರ್ಯಾಚರಿಸುತ್ತಿದೆ ಎಂದು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಪ್ರಧಾನ ವ್ಯವಸ್ಥಾಪಕ ರಾಜೇಶ್ ಖನ್ನಾ ತಿಳಿಸಿದರು.
ಅವರು ಬ್ಯಾಂಕ್ ಆಫ್ ಬರೋಡ ಪ್ರವರ್ತಿತ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ವತಿಯಿಂದ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ಇಂದು ಹಮ್ಮಿಕೊಂಡ “ಸ್ವಾವಲಂಬಿ 2026” ಮಹಿಳಾ ಉದ್ದಿಮೆದಾರರ ಸಮಾವೇಶ ಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಾರತ ಸರ್ಕಾರದ ಮುಖ್ಯ ಉದ್ದೇಶ ಸಮಾಜದ ಪ್ರತಿಯೊಂದು ವರ್ಗದ ಅಭಿವೃದ್ಧಿಯಾಗಿದೆ. ನಾರಿ ಶಕ್ತಿಯ ಅಭಿವೃದ್ಧಿಯಾಗದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. “ನಾರಿ ಸರ್ವತ್ರ ಪೂಜ್ಯತೆ” ಎಂಬ ತತ್ವದ ಆಧಾರದ ಮೇಲೆ ಸಮಾಜದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಯಾವ ದೇಶ, ಪ್ರದೇಶ ಅಥವಾ ಸಮಾಜ ನಾರಿ ಶಕ್ತಿಯನ್ನು ನಿರ್ಲಕ್ಷಿಸಿದೆ, ಅಲ್ಲಿ ವಿನಾಶದ ಸ್ಥಿತಿ ನಿರ್ಮಾಣವಾಗಿದೆ. ಎನ್‌ಆರ್‌ಎಲ್‌ಎಂ, ಎಸ್‌ಕೆಡಿಆರ್‌ಪಿ ಸೇರಿದಂತೆ ಹಲವು ಯೋಜನೆಗಳ ಮೂಲಕ ಮಹಿಳಾ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ಬ್ಯಾಂಕ್ ವ್ಯವಸ್ಥೆಗಳ ಮೂಲಕ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲಾಗುತ್ತಿದೆ. ಮಹಿಳೆಯರು ತಮ್ಮ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಹಾಗೂ ಆರ್ಥಿಕವಾಗಿ ಸದೃಢರಾಗಬೇಕು. ವಿಆರ್‌ಡಿಎಫ್ ಸಂಸ್ಥೆಯ ಬೋರ್ಡ್ ಸದಸ್ಯರು ಹಾಗೂ ಕಾರ್ಯದರ್ಶಿಗಳು ಎಲ್ಲರನ್ನು ಹಣಕಾಸು ಸಮಗ್ರತಾ ವ್ಯವಸ್ಥೆಗೆ ಒಳಪಡಿಸುವ ಅಗತ್ಯವಿದೆ . ಈಗಾಗಲೇ ಸಹಾಯ ಪಡೆದವರಿಗೆ ಆರ್ಥಿಕ ಸಬಲೀಕರಣ ಕಲ್ಪಿಸುವ ಕೆಲಸವೂ ನಡೆಯುತ್ತಿದೆ. ಸರ್ಕಾರದಿಂದ ಬಡ್ಡಿದರ ಸಬ್ಸಿಡಿ ಹಾಗೂ ಬಂಡವಾಳ ಸಬ್ಸಿಡಿ ಸೌಲಭ್ಯಗಳೂ ದೊರೆಯುತ್ತಿವೆ. ವಿಆರ್‌ಡಿಎಫ್ ಸಂಸ್ಥೆಯ ಮುಖ್ಯ ಉದ್ದೇಶ ಹೆಚ್ಚಿನ ಜನರನ್ನು ಆರ್ಥಿಕ ವ್ಯವಸ್ಥೆಗೆ ಸಂಪರ್ಕಿಸಿ, ಸುರಕ್ಷತೆ ಒದಗಿಸುವುದಾಗಿದೆ. ಎಂಬುದು ಸಂಸ್ಥೆಯ ಆಶಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಕಾರ್ಯದರ್ಶಿ ಬಿ. ರಾಜೇಂದ್ರ ರೈ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬ್ಯಾಂಕ್ ಆಫ್ ಬರೋಡಾ ಮಂಗಳೂರು ವಲಯದ ಉಪ ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ಶರ್ಮಾ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಇಂತಹ ತರಬೇತಿ ಮತ್ತು ಉದ್ಯಮಶೀಲತಾ ಕಾರ್ಯಕ್ರಮಗಳು ಅತ್ಯಂತ ಸಹಕಾರಿಯಾಗಿವೆ ಎಂದರು.
ಸಮಾವೇಶದಲ್ಲಿ ವಿವಿಧ ಕಾರ್ಯಗಾರಗಳಲ್ಲಿ ತರಬೇತಿ ಪಡೆದು ಸ್ವಉದ್ಯಮ ಆರಂಭಿಸಿದ ಮಹಿಳಾ ಉದ್ದಿಮೆದಾರರನ್ನು, ತರಬೇತುದಾರರನ್ನು ಅಭಿನಂದಿಸಲಾಯಿತು. ಮಹಿಳೆಯರು ತಯಾರಿಸಿದ ವಿವಿಧ ಉತ್ಪನ್ನಗಳ ಪ್ರದರ್ಶನವೂ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎನ್ ಆರ್ ಎಲ್ ಎಮ್ ಜಿಲ್ಲಾ ವ್ಯವಸ್ಥಾಪಕರಾದ ಹರಿಪ್ರಸಾದ್, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮಂಡಳಿ ಸದಸ್ಯರಾದ ಗಿರಿಜಾತೆ ಭಂಡಾರಿ ಹಾಗೂ ಪ್ರತಿಷ್ಠಾನದ ಖಜಾಂಚಿ ಮತ್ತು ಬ್ಯಾಂಕ್ ಆಫ್ ಬರೋಡಾ ಮಂಗಳೂರು ಪ್ರಾದೇಶಿಕ ಕಚೇರಿಯ ಉಪ ಪ್ರಧಾನ ವ್ಯವಸ್ಥಾಪಕರಾದ ಪಂಕಜ್ ಕುಮಾರ್ ಉಪಸ್ಥಿತರಿದ್ದರು.
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ.) ಮಂಗಳೂರು ಇದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜ್ಯೋತಿ ರಾಜ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇದರ ಕಾರ್ಯಕ್ರಮ ವ್ಯವಸ್ಥಾಪಕರಾದ ಜೀವನ್ ಕೊಲ್ಯ ಧನ್ಯವಾದಗೈದರು, ಚಂದ್ರಿಕಾ ರೈ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ತರಬೇತುದಾರರು, ಸ್ವಸಹಾಯ ಸಂಘಗಳ ಸದಸ್ಯರು ಭಾಗವಹಿಸಿದ್ದರು.