ನವದೆಹಲಿ, ಮೇ. 07; ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕ್ ಮೂಲದ ಉಗ್ರರು ನಡೆಸಿದ ನರಮೇಧಕ್ಕೆ ಪ್ರತೀಕಾರವಾಗಿ ಭಾರತ ನಡೆಸಿದ ʻಆಪರೇಷನ್ ಸಿಂಧೂರʼ ವಿಶೇಷ ಕಾರ್ಯಾಚರಣೆಗೆ 1 ವರ್ಷ ಪೂರ್ಣಗೊಂಡಿದೆ.
ಈ ಹೊತ್ತಿನಲ್ಲೇ ಪಾಕ್ ವಿರುದ್ಧ ತೀರಿಸಿಕೊಂಡ ಪ್ರತೀಕಾರ ಹಾಗೂ ಭಾರತೀಯ ಮೂರು ಸೇನೆಗಳ ಪರಾಕ್ರಮವನ್ನು ನೆನಪಿಸುವ ವಿಶೇಷ ವಿಡಿಯೋವೊಂದನ್ನು ಭಾರತೀಯ ವಾಯುಪಡೆ ಹಂಚಿಕೊಂಡಿದೆ.
ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಭಾರತೀಯ ವಾಯುಪಡೆ, ಆಪರೇಷನ್ ಸಿಂಧೂರ ನ್ಯಾಯ ದೊರಕಿಸಿದೆ. ಈ ಕಾರ್ಯ ನಿಖರವಾಗಿದ್ದು, ನೆನಪಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಬರೆದುಕೊಂಡಿದೆ. ಅಲ್ಲದೇ, ಭಾರತ ಯಾವುದನ್ನೂ ಮರೆಯುವುದಿಲ್ಲ-ಭಾರತ ಯಾವುದನ್ನೂ ಕ್ಷಮಿಸುವುದಿಲ್ಲ, ಆಪರೇಷನ್ ಸಿಂಧೂರ ಮುಂದುವರಿಯುತ್ತದೆ ಎಂದು ವಾಯುಪಡೆ ಎಚ್ಚರಿಸಿದೆ.ಅಲ್ಲದೇ ವಾಯುಪಡೆ ಹಂಚಿಕೊಂಡ ಇದೇ ವಿಡಿಯೋನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ಉಗ್ರರ ವಿರುದ್ಧ ಗುಡುಗಿದ್ದಾರೆ. ಭಾರತವು ಪ್ರತಿಯೊಬ್ಬ ಭಯೋತ್ಪಾದಕ ಮತ್ತು ಅವರ ಬೆಂಬಲಿಗರನ್ನ ಗುರುತಿಸಿ, ಪತ್ತೆಮಾಡಿ ಶಿಕ್ಷಿಸುತ್ತದೆ ಎಂದು ಹೇಳಿದ್ದಾರೆ.