ಉಳ್ಳಾಲ: ಹಜ್ ಯಾತ್ರೆ ದೇವನ ಮೇಲೆ ವಿಶ್ವಾಸದಿಂದ ಕೂಡಿರಬೇಕಿದ್ದು ಅದರ ಹೊರತು ತೋರ್ಪಡಿಕೆಗೆ ಸೀಮಿತವಾದರೆ ಅದರಿಂದ ಯಾವುದೇ ಪ್ರಯೋಜನ ಇಲ್ಲ. ಯಾತ್ರಿಕರನ್ನು ಬೀಳ್ಕೊಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹಳೆಕೋಟೆ ಜುಮಾ ಮಸೀದಿಯ ಖತೀಬ್ ಸಿರಾಜುದ್ದೀನ್ ಹಿಮಮಿ ಉಸ್ತಾದ್ ಹೇಳಿದರು.
ಕುಟುಂಬ ಸಮೇತ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲಿರುವ ದರ್ಗಾ ಅಧ್ಯಕ್ಷ ಬಿ.ಜಿ.ಹನೀಫ್ ಹಾಗೂ ಶಾಲಾ ಸಂಚಾಲಕ ಇಸ್ಮಾಯಿಲ್ ಹಾಜಬ್ಬ ಅವರಿಗೆ ಸಯ್ಯದ್ ಮದನಿ ವಿದ್ಯಾ ಸಂಸ್ಥೆಗಳ ವತಿಯಿಂದ ಹಳೆಕೋಟೆ ಸಯ್ಯದ್ ಮದನಿ ಶಾಲಾ ಸಭಾಂಗಣದಲ್ಲಿ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿದ ದರ್ಗಾ ಅಧ್ಯಕ್ಷ ಬಿ.ಜಿ.ಹನೀಫ್ ಮಾತನಾಡಿ, ಯಾವುದೇ ಫಲಾಪೇಕ್ಷೆ ಇಲ್ಲದೆ ಕೇವಲ ದೇವಭಯದಿಂದ ಹಜ್ ನಿರ್ವಹಿಸಿದರೆ ಆಗತಾನೇ ಹುಟ್ಟಿದ ಮಗುವಿನಂತೆ ಆಗುತ್ತಾನೆ ಎಂದು ಇಸ್ಲಾಮಿನಲ್ಲಿ ತಿಳಿಸಲಾಗಿದೆ ಎಂದರು.
ದರ್ಗಾ ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ ವೇ ಮಾತನಾಡಿ, ಹಜ್ ಯಾತ್ರೆ ಅಥವಾ ಯಾವುದೇ ಕಾರ್ಯ ಕೈಗೊಳ್ಳುವ ಸಂದರ್ಭ ಸನ್ಮಾನ ಕಾರ್ಯಕ್ರಮ ನಡೆಸುವಾಗ ಅಹಂಕಾರ ಬಂದರೆ ಆತನ ಎಲ್ಲ ಕರ್ಮಗಳೂ ನಿಷ್ಪ್ರಯೋಜಕ ಆಗುತ್ತದೆ. ಆದರೆ ದರ್ಗಾ ಅಧ್ಯಕ್ಷರಿಗೆ ಅಹಂಕಾರ ಬರಲಸಾಧ್ಯ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್, ಶಾಲಾಭಿವೃದ್ಧಿ ಸಮಿತಿ ಸದಸ್ಯ ಅಲ್ತಾಫ್ ಯು.ಎಚ್., ಮಾಜಿ ಸಂಚಾಲಕ ಇಬ್ರಾಹಿಂ, ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಡಾ.ಸಂಗೀತಾ, ಹಝ್ರತ್ ಸಯ್ಯದ್ ಮದನಿ ಶಿಕ್ಷಣ ಸಂಸ್ಥೆಗಳ ವಿವಿಧ ಶಾಲೆಗಳ ಮುಖ್ಯಶಿಕ್ಷಕರಾದ ಖಲೀಲ್ ಯು.ಎಚ್., ರಸೂಲ್ ಖಾನ್, ಇಮ್ತಿಯಾಝ್, ರಫೀಕ್ ತುಂಬೆ, ಖಾಲಿದ್, ರಮ್ಲತ್ ಮೊದಲಾದವರು ಉಪಸ್ಥಿತರಿದ್ದರು.
ಹಳೆಕೋಟೆ ಶಾಲೆಯ ಮುಖ್ಯಶಿಕ್ಷಕ ಕೆಎಂಕೆ ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.