Site icon Ullalavani

ಉಳ್ಳಾಲಬೈಲು ಇತ್ತಂಡಗಳ ಮಾರಾಮಾರಿ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲಬೈಲು: ಬೈಕ್ ಸೀಝ್ ಮಾಡಲು ಬಂದ ಸೀಝರ್‍ಗಳ ತಂಡ ಮತ್ತು ಬೈಕ್ ಮಾಲೀಕನ ತಂಡಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಶುಕ್ರವಾರ ಸಂಜೆ ತೊಕ್ಕೊಟ್ಟು ಉಳ್ಳಾಲಬೈಲಿನ ಗೇರುಕೃಷಿ ಅಭಿವೃದ್ಧಿ ಕೇಂದ್ರದ ಎದುರಿನಲ್ಲಿ ನಡೆದಿದೆ.

ಮಂಗಳೂರಿನಿಂದ ಉಳ್ಳಾಲ ಭಾಗಕ್ಕೆ ಕೆ.ಎ.19.ಇ.ಜೆ .5657 ಎಂಟೈಸರ್ ಬೈಕಿನಲ್ಲಿ ತೆರಳುತ್ತಿದ್ದ ಸವಾರರನ್ನು ಎಕ್ಕೂರು ಮೂಲದ ಫೈನಾನ್ಸ್ ನ ಇಬ್ಬರು ಸೀಝರ್ ಗಳು ಕೆ.ಎ.19.ಇ.ಬಿ 386 ಪಲ್ಸಾರ್ ಬೈಕಿನಲ್ಲಿ ಹಿಂಬಾಲಿಸಿದ್ದರು. ಉಳ್ಳಾಲಬೈಲು ಸಮೀಪ ಪಲ್ಸಾರ್ ಬೈಕಿನಲ್ಲಿದ್ದವರು ಎಂಟೈಸರ್ ಬೈಕಿಗೆ ಅಡ್ಡವಿಟ್ಟು ಫೈನಾನ್ಸಿನ ಕಂತು ಪಾವತಿಸದ ಹಿನ್ನೆಲೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ಫೈನಾನ್ಸ್ ಸೀಝರ್ ರಲ್ಲಿ ಓರ್ವ ಬೈಕಿನ ಕೀಯನ್ನು ತೆಗೆದು ಸಮೀಪದಲ್ಲಿದ್ದ ಮನೆಯೊಂದರ ಕಂಪೌಂಡಿನ ಒಳಗೆ ಬಿಸಾಡಿದ್ದರು.

ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ಹಾಗೂ ಹೊಡೆದಾಟ ನಡೆಯಿತು. ಈ ವೇಳೆ ಎರಡು ಬೈಕುಗಳಲ್ಲಿ ಇದ್ದಂತಹ ಇಬ್ಬರು ತಮ್ಮ ತಂಡಗಳಿಗೆ ವಿಷಯ ತಿಳಿಸಿದ್ದು, ಕೂಡಲೇ ಉಳ್ಳಾಲ ಭಾಗದಿಂದ 10-15 ಮಂದಿಯ ತಂಡ ಜಮಾಯಿಸಿ ಸೀಝರ್ ಗಳಿಬ್ಬರಿಗೆ ಹಲ್ಲೆ ನಡೆಸಿದರೆ, ಇನ್ನೊಂದು ಫೈನಾನ್ಸಿನವರ ತಂಡ ಸ್ಥಳಕ್ಕಾಗಮಿಸಿದ ಪರಿಣಾಮ ಎರಡು ತಂಡಗಳ ನಡುವೆ ಹೊೈಕೈ ನಡೆಯಿತು. ಉಳ್ಳಾಲ ಪೊಲೀಸರಿಗೆ ಮಾಹಿತಿ ಬಂದು ಅವರು ಸ್ಥಳಕ್ಕೆ ಬರುವಷ್ಟರಲ್ಲಿ ಎರಡು ಬೈಕುಗಳನ್ನು ಸ್ಥಳದಲ್ಲೇ ಬಿಟ್ಟು ಹೊಡೆದಾಟದಲ್ಲಿ ಭಾಗವಹಿಸಿದ್ದವರೆಲ್ಲರೂ ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದವರು ಸ್ಥಳೀಯ ಯಾವುದೇ ಆಸ್ಪತ್ರೆಗಳಲ್ಲಿ ದಾಖಲಾಗಿಯೂ ಇಲ್ಲ.

ಉಳ್ಳಾಲ ಠಾಣೆಯಲ್ಲಿ ಯಾವುದೇ ಪ್ರಕರಣವೂ ದಾಖಲಾಗಿಲ್ಲ. ಆದರೆ ಎರಡು ಬೈಕುಗಳನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Exit mobile version