ಉಳ್ಳಾಲ, ಮೇ-04:ಸೋಮೇಶ್ವರ ಪುರಸಭಾ ವ್ಯಾಪ್ತಿಯ ಆಸ್ತಿ ಮಾಲೀಕರು ಹಾಗೂ ಅನುಭೋಗದಾರರಿಗೆ ಮಹತ್ವದ ಮಾಹಿತಿಯೊಂದನ್ನು ಪುರಸಭೆ ಪ್ರಕಟಿಸಿದೆ. ಸರಕಾರದ ಆದೇಶದಂತೆ 2026-27ನೇ ಸಾಲಿನ ಸ್ವಯಂಘೋಷಿತ ಆಸ್ತಿ ತೆರಿಗೆಯನ್ನು ಮೇ ತಿಂಗಳೊಳಗೆ ಪಾವತಿಸಿದಲ್ಲಿ ಶೇ.5 ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
ಈ ರಿಯಾಯಿತಿ 2026ರ ಮೇ 30ರವರೆಗೆ ಮಾತ್ರ ಅನ್ವಯವಾಗುತ್ತದೆ. ಜೂನ್ ತಿಂಗಳಲ್ಲಿ ತೆರಿಗೆ ಪಾವತಿಸಿದರೂ ಯಾವುದೇ ದಂಡ ವಿಧಿಸಲಾಗುವುದಿಲ್ಲ. ಆದರೆ ಜುಲೈ ತಿಂಗಳಿಂದ ಪ್ರತಿ ತಿಂಗಳಿಗೆ ಶೇ.2ರಷ್ಟು ದಂಡ ವಿಧಿಸಲಾಗುವುದು ಎಂದು ಪುರಸಭೆ ಎಚ್ಚರಿಕೆ ನೀಡಿದೆ.
ಆಸ್ತಿ ತೆರಿಗೆ ಬಾಕಿ ಇರುವವರು ಕೂಡಲೇ ಪಾವತಿಸಬೇಕೆಂದು ಕೋರಲಾಗಿದ್ದು, 2026-27ನೇ ಸಾಲಿಗೆ ಉದ್ಯಮ ಪರವಾನಿಗೆಯನ್ನು ನವೀಕರಿಸುವುದು ಹಾಗೂ ನೀರಿನ ಶುಲ್ಕವನ್ನು ಪಾವತಿಸುವಂತೆ ಪುರಸಭೆ ಸೂಚಿಸಿದೆ.
ಪುರಸಭೆಯ ಪ್ರಕಟಣೆಯಂತೆ, ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸುವಂತೆ ಮನವಿ ಮಾಡಲಾಗಿದೆ.