ಉಳ್ಳಾಲ: ಮಾತು ಬಾರದ ಪ್ರಾಣಿ ಪಕ್ಷಿಗಳಿಗೂ ಸಹ ಉಳಿಯಲು ಒಂದು ಸೂರು ಇರುತ್ತದೆ.ಅದೇ ರೀತಿ ಮಾನವರು ಕೂಡಾ ವ್ಯವಸ್ಥಿತ ಜೀವನ ಸಾಗಿಸಲು ಮನೆಯು ಅತ್ಯಾವಶ್ಯಕವಾಗಿದೆ.ಪತಿ ಮತ್ತು ಪುತ್ರನನ್ನ ಕಳಕೊಂಡು ಸಂಕಷ್ಟದಲ್ಲಿದ್ದ ವೃದ್ಧೆ ವೀರಮ್ಮ ಅವರಿಗೆ ಸುಸಜ್ಜಿತ ಮನೆ ನಿರ್ಮಿಸಿ ಕೊಟ್ಟು ಸಂಘ ಶತಾಬ್ಧಿಯನ್ನು ಅರ್ಥಪೂರ್ಣವಾಗಿ ಸಂಭ್ರಮಿಸಿದ ಕುಂಪಲದ ರಾಷ್ಟ್ರೀಯ ಸೇವಾ ಭಾರತಿ ಕೇಸರಿ ಶಾಖೆಯ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆಯೆಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ಧಿಯ ಪ್ರಯುಕ್ತ ಸಂಘ ಪ್ರೇರಿತ ಸಂಸ್ಥೆಯಾದ ಕುಂಪಲದ ರಾಷ್ಟ್ರೀಯ ಸೇವಾ ಭಾರತಿ ಕೇಸರಿ ಶಾಖೆಯ ಮುಂದಾಳುತ್ವದಲ್ಲಿ ಕುಂಪಲ ಕೇಸರಿ ಮಿತ್ರ ವೃಂದ ಸೇವಾ ಟ್ರಸ್ಟ್ ,ಕೇಸರಿ ಮಿತ್ರ ವೃಂದ ,ಕೇಸರಿ ಮಾತೃ ಮಂಡಳಿಯ ಸಹಯೋಗ ಹಾಗೂ ಸಮಾಜದ ದಾನಿಗಳ ಸಹಕಾರದಿಂದ ಪತಿ ಮತ್ತು ಮಗನನ್ನ ಕಳಕೊಂಡು ವಿಧವೆ ಸೊಸೆ ಹಾಗೂ ಮೂರು ಮೊಮ್ಮಕ್ಕಳೊಂದಿಗೆ ವಾಸವಿರುವ ಕುಂಪಲ ಬಗಂಬಿಲದ ಅಮೃತನಗರ ನಿವಾಸಿ ವೃದ್ಧೆ ವೀರಮ್ಮ ಅವರಿಗೆ ನಿರ್ಮಿಸಿ ಕೊಡಲಾದ “ದೇವಿ ನಿಲಯ” ನೂತನ ಮನೆಯ ಗೃಹ ಪ್ರವೇಶ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕುಂಪಲ ಕೇಸರಿ ಮಿತ್ರ ವೃಂದ ಟ್ರಸ್ಟ್ ನ ಸ್ಥಾಪಕಾಧ್ಯಕ್ಷರಾದ ನಾರಾಯಣ ಕುಂಪಲ ಮಾತನಾಡಿ ರಾಷ್ಟ್ರೀಯ ಸ್ವಯಂ ಸೇವಾ ಸಂಘ ಪ್ರೇರಿತ ವಿವಿಧ ಸಂಘ ಸಂಸ್ಥೆಗಳ ಸಹಯೋಗ ಹಾಗೂ ದಾನಿಗಳ ಸಹಕಾರದಿಂದ ಸಂಘ ಶತಾಬ್ಧಿಯ ಪ್ರಯುಕ್ತ ವೀರಮ್ಮ ಅವರ ಕುಟುಂಬಕ್ಕೆ ಸುಸಜ್ಜಿತ ತಾರಸಿ ಮನೆಯನ್ನು ನಿರ್ಮಿಸಿ ಕೊಡಲಾಗಿದೆ.ಸಂಕಷ್ಟದಲ್ಲಿರುವವರಿಗೆ ಸಹಾಯ ಚಾಚುವುದೇ ಸಂಘದ ಮೂಲ ಉದ್ದೇಶವಾಗಿದೆ.ವೀರಮ್ಮ ಅವರು ಸಂಸಾರ ಸಾಗಿಸಲು ತನ್ನ ಇಳಿ ವಯಸ್ಸಲ್ಲಿ ದೇವಸ್ಥಾನಗಳಲ್ಲಿ ಪಾತ್ರೆ ತೊಳೆದು ಬಹಳ ಕಷ್ಟದ ದಿನಗಳನ್ನ ಕಳೆಯುತ್ತಿದ್ದರು.ಅವರ ಕುಟುಂಬಕ್ಕೆ ಆಸರೆಯಾಗುವ ನಿಟ್ಟಿನಲ್ಲಿ ಸಂಘದ ಹಿರಿಯರ ಮಾರ್ಗದರ್ಶನ ಪಡೆದು ಮನೆ ನಿರ್ಮಾಣ ಕಾಮಗಾರಿಗೆ ಇಳಿದಿದ್ದೆವು.ಕಲ್ಲು,ಮರಳು ಅಭಾವದಿಂದ ಮನೆ ನಿರ್ಮಾಣ ಕಾಮಗಾರಿ ಕೊಂಚ ವಿಳಂಬ ಆದರೂ ಸುಂದರ,ಸುಸಜ್ಜಿತ ಮನೆ ನಿರ್ಮಾಣಗೊಂಡಿರುವುದು ನಮಗೆ ಬಹಳಷ್ಟು ಸಂತೃಪ್ತಿ ನೀಡಿದೆ.ನೂತನ ಮನೆಯಲ್ಲಿ ವೀರಮ್ಮ ಅವರ ಕುಟುಂಬವು ಸಂತೋಷದಿಂದ ಜೀವನ ನಡೆಸಲಿಯೆಂದು ಹಾರೈಸಿದರು.
ಸೋಮೇಶ್ವರ ಪುರಸಭೆಯ ಅಧ್ಯಕ್ಷರಾದ ಕಮಲ,ಸ್ಥಳೀಯ ಪುರಸಭಾ ಸದಸ್ಯರಾದ ಮಾಲತಿ,ಕುಂಪಲ ಕೇಸರಿ ಮಿತ್ರ ವೃಂದ ಟ್ರಸ್ಟ್ ನ ಅಧ್ಯಕ್ಷರಾದ ಸುಧಾಕರ ಕುಂಪಲ,ಕಾರ್ಯದರ್ಶಿ ವೆಂಕಟೇಶ್ ಕುಂಪಲ,ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಗ್ರಾಮ ವಿಕಾಸ ವಿಭಾಗ ಟೋಲಿ ಸದಸ್ಯ ರವಿಚಂದ್ರನ್ ,ಪರ್ಯಾವರಣ ಕರ್ನಾಟಕ ಪ್ರಾಂತ ಸಹ ಸಂಯೋಜಕ ಚಂದ್ರಹಾಸ ಮಾಸ್ಟರ್,ವಿಶ್ವ ಹಿಂದೂ ಪರಿಷತ್ನ ಸಹ ಸೇವಾ ಪ್ರಮುಖರಾದ ಗೋಪಾಲ ಕುತ್ತಾರು,ಕರಾವಳಿ ಕರ್ನಾಟಕ ಪರಿಷತ್ ವಿಭಾಗ ಸಂಯೋಜಕರಾದ ಸೂರಜ್ ತೊಕ್ಕೊಟ್ಟು,ಕೇಸರಿ ಮಿತ್ರ ವೃಂದ ಮಾತೃ ಮಂಡಳಿ ಅಧ್ಯಕ್ಷೆ ದಿವ್ಯ ರಾಕೇಶ್,ನಿಕಟ ಪೂರ್ವ ಅಧ್ಯಕ್ಷೆ ಆಶಾ ಸುರೇಶ್,ಸದಸ್ಯರಾದ ಕುಸುಮಾ,ಆಶಾ,ಶಶಿಕಲಾ,ಲಿಸಿತಾ,ಪ್ರಮುಖರಾದ ಜಗನ್ನಾಥ ಕುತ್ತಾರು ಮೊದಲಾದವರು ಉಪಸ್ಥಿತರಿದ್ದರು.
ವೀರಮ್ಮರ ಮೊಮ್ಮಗನಿಗೆ ಉಚಿತ ಆಂಗ್ಲ ಶಿಕ್ಷಣ;
ವೃದ್ಧೆ ವೀರಮ್ಮ ಅವರ ಕಿರಿಯ ಮೊಮ್ಮಗ ಮನೋಜ್ ಆರಂಭದಲ್ಲಿ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿದ್ದು,ತಂದೆಯ ಮರಣಾ ನಂತರ ಕುಂಪಲ,ಬಗಂಬಿಲದ ಸರಕಾರಿ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿದ್ದಾನೆ.ಮನೋಜ್ಗೆ ತನ್ನ ಒಡೆತನದ ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿ ನೀಡುವುದಾಗಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಅವರು ವೀರಮ್ಮ ಅವರಿಗೆ ಮಾತು ಕೊಟ್ಟರು.