ಬೆಂಗಳೂರು, ಮೇ. 04 : ಪಶ್ಚಿಮ ಬಂಗಾಲ, ಅಸ್ಸಾಂ, ಪುದುಚೇರಿಯಲ್ಲಿ ಬಿಜೆಪಿ ಗೆಲುವು ಒಂದು ಕಡೆ ನರೇಂದ್ರ ಮೋದಿಜೀ ಅವರ ನಾಯಕತ್ವಕ್ಕೆ ದೊಡ್ಡ ಶಕ್ತಿಯನ್ನು ತುಂಬಿದಂತಾಗಿದೆ. ನಮ್ಮ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್‍ಜೀ ಅವರ ಮೊದಲ ಚುನಾವಣೆ ಇದಾಗಿದೆ. ಬಹುದೊಡ್ಡ ಸಂದೇಶವನ್ನು ನೀಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದರು.
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಡೀ ದೇಶದಲ್ಲಿ ಅಮಿತ್ ಶಾ ಜೀ ಅವರು ಚುನಾವಣಾ ಚಾಣಕ್ಯ ಎಂದು ಪ್ರತಿಯೊಬ್ಬರು ಮಾತನಾಡುತ್ತಿದ್ದಾರೆ. ಅಮಿತ್ ಶಾ ಜೀ ಅವರ ತಂತ್ರಗಾರಿಕೆಯೂ ಈ ಗೆಲುವಿನ ಹಿಂದಿದೆ ಎಂದರು.ಪಶ್ಚಿಮ ಬಂಗಾಲದ ಗೆಲುವಿಗಾಗಿ ಅಲ್ಲಿನ ಕಾರ್ಯಕರ್ತರಿಗೆ ನಾವು ದೊಡ್ಡ ಸಲಾಂ ಹೇಳಬೇಕಿದೆ. ಅಲ್ಲಿ ಹಲವು ದಶಕಗಳಿಂದ ನಮ್ಮ ಕಾರ್ಯಕರ್ತರ ಮೇಲೆ ನಿರಂತರ ದಬ್ಬಾಳಿಕೆ ಆಗುತ್ತಿತ್ತು. ಇದೆಲ್ಲದಕ್ಕೂ ಇತಿಶ್ರೀ ಹಾಕುವ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡಿದ್ದಾರೆ ಎಂದರಲ್ಲದೇ 3 ರಾಜ್ಯಗಳ ಕಾರ್ಯಕರ್ತರಿಗೆ ವಂದನೆ, ಅಭಿನಂದನೆ ತಿಳಿಸುವುದಾಗಿ ಹೇಳಿದರು.ಎರಡೂ ಕ್ಷೇತ್ರಗಳಲ್ಲಿ ನಮ್ಮ ಕಾರ್ಯಕರ್ತರು ಸಾಕಷ್ಟು ಶ್ರಮ ಹಾಕಿದ್ದಾರೆ.. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆಗಳ ಕುರಿತು ಪ್ರಸ್ತಾಪಿಸಿದ ಅವರು, ದಾವಣಗೆರೆ ದಕ್ಷಿಣದಲ್ಲಿ ಕಡಿಮೆ ಅಂತರದಲ್ಲಿ ನಿರ್ಧಾರ ಆಗಲಿದೆ. ದಾವಣಗೆರೆಯಲ್ಲಿ ಬಿಜೆಪಿ ಗೆದ್ದೇ ಗೆಲ್ಲುವ ವಿಶ್ವಾಸ ಇದೆ ಎಂದು ತಿಳಿಸಿದರು. ಬಾಗಲಕೋಟೆಯ ಸೋಲನ್ನು ನಿರೀಕ್ಷಿಸಿರಲಿಲ್ಲ. ಹಿಂದೆ ಕಾಂಗ್ರೆಸ್ ಪಕ್ಷ ಗೆದ್ದಿದ್ದರೂ ಈ ಬಾರಿ ಮತದಾರರು ನಮ್ಮ ಕೈಹಿಡಿಯುವ ವಿಶ್ವಾಸ ಇತ್ತು. ಎರಡೂ ಕ್ಷೇತ್ರಗಳಲ್ಲಿ ನಮ್ಮ ಕಾರ್ಯಕರ್ತರು ಸಾಕಷ್ಟು ಶ್ರಮ ಹಾಕಿದ್ದಾರೆ ಎಂದು ತಿಳಿಸಿದರು. ಇದರ ಮಿಗಿಲಾಗಿ ಮುಖ್ಯಮಂತ್ರಿಯವರು ಬಾಗಲಕೋಟೆಯಲ್ಲಿ ಬಂದು 15 ದಿನ ಬೀಡು ಬಿಟ್ಟಿದ್ದರು. ಸಚಿವ ಸಂಪುಟದ ಸದಸ್ಯರೂ ಬೀಡು ಬಿಟ್ಟಿದ್ದರು. ಆದರೂ ಗೆಲುವಿನ ವಿಶ್ವಾಸ ನಮಗಿತ್ತು. ಆದರೆ, ಬಾಗಲಕೋಟೆಯಲ್ಲಿ ನಮಗೆ ಹಿನ್ನಡೆ ಆಗಿದೆ ಎಂಬುದನ್ನು ಒಪ್ಪಿಕೊಳ್ಳುವುದಾಗಿ ಹೇಳಿದರು.ಉಪ ಚುನಾವಣೆ ಗೆದ್ದಿದೆ ಎಂದರೆ ಕಾಂಗ್ರೆಸ್ ಪಕ್ಷದ ಕಡೆ ಒಲವಿದೆ ಎನ್ನಲು ಸಾಧ್ಯವಿಲ್ಲ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು. ಬಾಗಲಕೋಟೆಯಲ್ಲಿನ ಹಿನ್ನಡೆ ಕುರಿತು ನಾವು ಮುಖಂಡರ ಜೊತೆ ಕುಳಿತು ಚರ್ಚೆ ಮಾಡಬೇಕಾಗಿದೆ. ತದನಂತರ ನಮ್ಮ ಸಂಘಟಿತ ಕಾರ್ಯದ ಕುರಿತು ಕಾರ್ಯತಂತ್ರ ಮಾಡುತ್ತೇವೆ ಎಂದು ನುಡಿದರು.