ದೇರಳಕಟ್ಟೆಯ ಝುಲೇಖಾ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ಆಸ್ಪತ್ರೆ ವೈದ್ಯರ ತಂಡವು 13 ಗಂಟೆಗಳ ದೀರ್ಘಕಾಲದ ಶಸ್ತ್ರಚಿಕಿತ್ಸೆ ನಡೆಸಿ, ಕ್ಯಾನ್ಸರ್‌ನಿಂದಾಗಿ ತುಂಡರಿಸಬೇಕಾಗಿದ್ದ ವ್ಯಕ್ತಿಯ ಕಾಲನ್ನು ಉಳಿಸುವಲ್ಲಿ ಯಶಸ್ವಿಯಾಗಿ ಹೊಸ ದಾಖಲೆ ನಿರ್ಮಿಸಿದೆ.
ಹಾವೇರಿ ಮೂಲದ 39 ವರ್ಷದ ವ್ಯಕ್ತಿಯ ತೊಡೆಯ ಮೂಳೆ ಮತ್ತು ಸ್ನಾಯುಗಳಲ್ಲಿ ಕ್ಯಾನ್ಸರ್ ಇರುವುದನ್ನು ಬಯೋಪ್ಸಿ ಮೂಲಕ ದೃಢಪಟ್ಟಿತ್ತು. ರಾಜ್ಯದ ಹಲವು ಆಸ್ಪತ್ರೆಗಳು ಕಾಲು ತೆಗೆಯುವ (ಅಂಪ್ಯುಟೇಶನ್) ಸಲಹೆ ನೀಡಿದ್ದರೂ, ಯೆನೆಪೋಯ ಆಸ್ಪತ್ರೆಯ ವೈದ್ಯರು ಪರ್ಯಾಯ ಚಿಕಿತ್ಸಾ ಮಾರ್ಗವನ್ನು ಹುಡುಕಿ, ಕಾಲು ಉಳಿಸುವ ಸಂಕೀರ್ಣ ಶಸ್ತ್ರಚಿಕಿತ್ಸೆಗೆ ಮುಂದಾದರು.
ಇದೇ ಮಾದರಿಯ ಶಸ್ತ್ರಚಿಕಿತ್ಸೆಯನ್ನು ಯುನೈಟೆಡ್ ಕಿಂಗ್ಡಮ್‌ನ ಬರ್ಮಿಂಗ್‌ಹ್ಯಾಮ್‌ನ ರಾಯಲ್ ಆರ್ಥೋಪೆಡಿಕ್ ಆಸ್ಪತ್ರೆಯಲ್ಲಿ ಈಗಾಗಲೇ ಎರಡು ಬಾರಿ ನಡೆಸಲಾಗಿದ್ದು, ಅದೇ ರೀತಿಯ ತಂತ್ರವನ್ನು ಇಲ್ಲಿ ಯಶಸ್ವಿಯಾಗಿ ಅನ್ವಯಿಸಲಾಗಿದೆ. ಸುಮಾರು 13 ಗಂಟೆಗಳ ಕಾಲ ನಡೆದ ಈ ಮಹಾ ಶಸ್ತ್ರಚಿಕಿತ್ಸೆಯಲ್ಲಿ, ಕ್ಯಾನ್ಸರ್ ಪೀಡಿತ ಮೂಳೆ ಮತ್ತು ಸ್ನಾಯುಗಳನ್ನು ತೆಗೆದು, ಟೈಟಾನಿಯಂ ಮೆಗಾ ಪ್ರೊಸ್ಥೆಸಿಸ್ ಬಳಸಿ ಕಾಲಿನ ಪುನರ್‌ನಿರ್ಮಾಣ ಮಾಡಲಾಗಿದೆ. ಜೊತೆಗೆ, ದೇಹದ ಇತರೆ ಭಾಗಗಳಿಂದ ಸ್ನಾಯು ಮತ್ತು ನರಗಳನ್ನು ವರ್ಗಾಯಿಸಿ ಮೈಕ್ರೋನ್ಯೂರೋವ್ಯಾಸ್ಕುಲರ್ ತಂತ್ರಜ್ಞಾನದ ಮೂಲಕ ಪುನಃ ಜೋಡಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಜಲಾಲುದ್ದೀನ್ ಅಕ್ಬರ್, “ಇದು ಕೇವಲ ಶಸ್ತ್ರಚಿಕಿತ್ಸೆಯಲ್ಲ, ರೋಗಿಯ ಜೀವನದ ಗುಣಮಟ್ಟವನ್ನು ಉಳಿಸುವ ಪ್ರಯತ್ನ. ಕಾಲು ತೆಗೆಯುವುದೇ ಅಂತಿಮ ಪರಿಹಾರವಲ್ಲ ಎಂಬುದನ್ನು ನಾವು ಸಾಬೀತುಪಡಿಸಿದ್ದೇವೆ” ಎಂದರು.
ಸಹಪ್ರಾಧ್ಯಾಪಕ ಡಾ. ರೋಹನ್ ಶೆಟ್ಟಿ ಮಾತನಾಡಿ, “ಶಸ್ತ್ರಚಿಕಿತ್ಸೆಯ ವೇಳೆ ತೊಡೆಯ ಮೂಳೆಯ ಸಂಪೂರ್ಣ ಭಾಗವನ್ನು ತೆಗೆದು, ಟೈಟಾನಿಯಂ ಬಳಸಿ ಪುನರ್ ನಿರ್ಮಿಸಲಾಗಿದೆ. ರೋಗಿಯ ಸ್ಥಿತಿ ಈಗ ಉತ್ತಮವಾಗಿದೆ” ಎಂದು ತಿಳಿಸಿದರು.
ಆಸ್ಪತ್ರೆ ನಿರ್ದೇಶಕ ಡಾ. ಎಂ. ವಿಜಯಕುಮಾರ್ ಮಾಹಿತಿ ನೀಡುತ್ತಾ, “ಈ ಅಪರೂಪದ ಶಸ್ತ್ರಚಿಕಿತ್ಸೆಯನ್ನು ಆಯುಷ್ಮಾನ್ ಯೋಜನೆಯಡಿ ಸಂಪೂರ್ಣ ಉಚಿತವಾಗಿ ನಡೆಸಲಾಗಿದೆ. ವೈದ್ಯರ ತಂಡದ ಸಾಧನೆ ಶ್ಲಾಘನೀಯ” ಎಂದರು.
ಸುದ್ದಿಗೋಷ್ಠಿಯಲ್ಲಿ ಡಾ. ಹಬೀಬ್ ರೆಹಮಾನ್, ಡಾ. ಹೆಚ್.ಟಿ. ಅಮರ್ ರಾವ್, ಡಾ. ನೂರ್ ಮೊಹಮ್ಮದ್, ಡಾ. ತೇಜೇಶ್ ಕೃಷ್ಣ, ಡಾ. ಲಕ್ಷ್ಮೀ ಶೆಣೈ, ಡಾ. ಟಿ.ವಿ. ಸತೀಶ್ ಬಾಬು, ಡಾ. ಅಭಿಷೇಕ್ ಶೆಟ್ಟಿ, ಡಾ. ಲೋಕೇಶ್, ಡಾ. ದೇವಿಪ್ರಸಾದ್, ಡಾ. ಚಾಂದಿನಿ, ಡಾ. ಶೃತಿ, ಡಾ. ಪ್ರೀತಿ ಹಾಗೂ ಅಕ್ಯುಪೇಶನಲ್ ಥೆರಪಿಸ್ಟ್ ಡಾ. ಮಹಮ್ಮದ್ ಚೌಧರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.