ಕಾರ್ಕಳ,ಏ. 27: ಮನೆಯೊಂದಕ್ಕೆ ನುಗ್ಗಿದ ಕಳ್ಳರು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ಕಾರ್ಕಳದಲ್ಲಿ ನಡೆದಿದ್ದು, ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಬಂಧಿತ ಆರೋಪಿಗಳನ್ನು , ಉಡುಪಿಯ ಬೈರಂಪಳ್ಳಿ ಗ್ರಾಮದ ಆನಂದ ಕುಲಾಲ್ (40), ಕೈಕಂಬ ಅಜೆಕಾರು ಮರ್ಣೆ ಗ್ರಾಮದ ಜಯರಾಮ ಆಚಾರ್ಯ (54) ಎಂದು ಗುರುತಿಸಲಾಗಿದೆ. ಘಟನೆ ನಡೆದು 24 ಗಂಟೆಯೊಳಗೆ ಆನಂದ ಕುಲಾಲ್ ಎಂಬಾತನನ್ನು ವಶಕ್ಕೆ ಪಡೆಯಲಾಗಿತ್ತು. ಈತ ಕಳವು ಮಾಡಿದ ಚಿನ್ನವನ್ನು ಜಯರಾಮ ಆಚಾರ್ಯ (54)ಗೆ ಮಾರಾಟ ಮಾಡಿದ್ದ. ಈ ಹಿನ್ನೆಲೆಯಲ್ಲಿ ಜಯರಾಮ ಆಚಾರ್ಯನನ್ನು ಕೂಡ ಬಂಧಿಸಲಾಗಿದೆ.ಕಳವು ಆದ ಸುಮಾರು 5,60,000 ರೂ ಮೌಲ್ಯದ 39.00 ಗ್ರಾಂ ತೂಕದ ಚಿನ್ನವನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿಸಲಾಗಿದೆ.ಶಂಕರ ಕುಲಾಲ್ ಎಂಬವರು ಮನೆಗೆ ಬೀಗ ಹಾಕಿ ಎ.23ರಂದು ಕೆಲಸಕ್ಕೆ ಹೋಗಿದ್ದು, ಎ.24ರಂದು ಸಂಜೆ ವೇಳೆ ಮನೆಗೆ ಬಂದು ನೋಡಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಮನೆಯ ಮುಂದಿನ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು, ಕಪಾಟಿನಲ್ಲಿಟ್ಟಿದ್ದ ಹಳೆಯ ಸುಮಾರು 24 ಗ್ರಾಂ ತೂಕದ ಚಿನ್ನದ ನೆಕ್ಲೆಸ್, 3 ಚಿನ್ನದ ಉಂಗುರ, ಚಿನ್ನದ ಬೆಂಡೋಲೆ, ಚಿನ್ನದ ಜುಮ್ಕಿಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಚಿನ್ನದ ಒಟ್ಟು ಮೌಲ್ಯ 2,64,000ರೂ. ಎಂದು ಅಂದಾಜಿಸಲಾಗಿದೆ.ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.