ಪ್ರಸ್ತುತ ದಿನಗಳಲ್ಲಿ ಹಾಳಾಗಿರುವುದು ಮನುಷ್ಯನೇ ಹೊರತು ಕಾಲವಲ್ಲ. ಕಲಿಯುಗದಲ್ಲಿ ದೇವರ ಆರಾಧನೆಯ ಏಕೈಕ ಮಾರ್ಗ ಭಜನೆ. ಧಾರ್ಮಿಕ ಕ್ಷೇತ್ರಗಳಿಗೆ ಹೋಗುವಾಗ ತಮ್ಮೊಂದಿಗೆ ಮಕ್ಕಳನ್ನೂ ಕರೆದೊಯ್ಯಿರಿ, ಯಾವ ಸಂದರ್ಭದಲ್ಲಿ ಯಾವ ರೀತಿಯ ವಸ್ತ್ರ ಧರಿಸಬೇಕು ಎನ್ನುವ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ಸಾಹಿತಿ ವಿಜಯಲಕ್ಷ್ಮಿ ಕಟೀಲ್ ಅಭಿಪ್ರಾಯಪಟ್ಟರು.
ನಡಾರು ಸಾಯಿನಗರ ಶ್ರೀ ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಆಶ್ರಯದಲ್ಲಿ ನಡೆದ ವಾರ್ಷಿಕ ಕೋಲೋತ್ಸವ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು.
ಕೋಟೆಕಾರ್ ಪ.ಪಂ. ಸದಸ್ಯ ಸುಜಿತ್ ಮಾಡೂರು ಮಾತನಾಡಿ, ಯಾವುದೇ ಕಾರ್ಯ ನಡೆಯಬೇಕಾದರೆ ಅದಕ್ಕೆ ವ್ಯಕ್ತಿಗಿಂತ ದೈವ ಪ್ರೇರಣೆ ಅಗತ್ಯ. ಸ್ಥಳೀಯ ಭಾಗದಲ್ಲಿ ಕೊರಗಜ್ಜ ಕ್ಷೇತ್ರ ವೇಗವಾಗಿ ಬೆಳೆದಿರುವುದೇ ಸಾಕ್ಷಿ ಎಂದು ತಿಳಿಸಿದರು.
ಈ ಸಂದರ್ಭ ಸಾಯಿನಗರ ಶ್ರೀ ಸ್ವಾಮಿ ಕೊರಗಜ್ಜ ಸೇವಾ ಸಮಿತಿಯ ಅಧ್ಯಕ್ಷ ಕೃಷ್ಣಕಾಂತ್ ಸಾಯಿನಗರ ಅಧ್ಯಕ್ಷತೆ ವಹಿಸಿದ್ದರು. ಕೋಟೆಕಾರ್ ಪಟ್ಟಣ ಪಂಚಾಯಿತಿ ಸದಸ್ಯರಾದ ಹರೀಶ್ ರಾವ್, ಕ್ಷೇತ್ರದ ಅರ್ಚಕ ಕೃಷ್ಣ ಶೆಟ್ಟಿ ಸಾಯಿನಗರ, ರಾಘವೇಂದ್ರ, ಉದ್ಯಮಿ ಪ್ರಕಾಶ್, ಸುಧಾಕರ್, ಗಂಗಾಧರ್ ಬಲ್ಯ, ಸಾಯಿನಗರ ಟೀಂ ಯಶಸ್ವಿ ಅಧ್ಯಕ್ಷ ಅಕ್ಷಯ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಭಾಸ್ಕರ ಮಡ್ಯಾರ್, ಪ್ರವೀಣ್ ನಡಾರ್, ಶ್ರೀ ಸ್ವಾಮಿ ಕೊರಗಜ್ಜ ಸೇವಾ ಸಮಿತಿಯ ಕೋಶಾಧಿಕಾರಿಗಳಾದ ಹರಿಣಾಕ್ಷಿ, ರುಕ್ಮಿಣಿ ಮೊದಲಾದವರು ಉಪಸ್ಥಿತರಿದ್ದರು.
ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿದರು.