ಮಂಗಳೂರು: ನಗರದ ಬಂದರ್ ದಕ್ಕೆಯ ಮೀನು ವ್ಯಾಪಾರಿ, ರೌಡಿಶೀಟರ್ ಆರೀಫ್ (46) ಹತ್ಯೆ ಪ್ರಕರಣದ ಎಲ್ಲಾ ಆರೋಪಿಗಳ ವಿರುದ್ಧ ಕೆ-ಕೋಕಾ ಜಾರಿಗೊಳಿಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಆದೇಶಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಬಳಿಕ ವಿಚಾರಣೆಗೆ ಪ್ರಕರಣವನ್ನು ಮೈಸೂರು ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲಾಗುತ್ತದೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಕೊಲೆ ಪ್ರಕರಣದ ತನಿಖೆಯ ವೇಳೆ 15 ಆರೋಪಿಗಳು ಭಾಗಿಯಾಗಿರುವುದು ಸ್ಪಷ್ಟವಾಗಿದೆ. ಆ ಪೈಕಿ 10 ಮಂದಿಯನ್ನು ಬಂಧಿಸಲಾಗಿದೆ. ಅವರನ್ನು ವಿಚಾರಣೆ ಮತ್ತು ತನಿಖೆಗಾಗಿ ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಇದೀಗ ಪೊಲೀಸ್ ಕಸ್ಟಡಿಯ ಅವಧಿ ಮುಗಿದಿದೆ. ಹಾಗಾಗಿ ಮತ್ತೆ ಅವರನ್ನು ನ್ಯಾಯಾಂಗದ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು. ತನಿಖೆಯ ವೇಳೆ ಐವರು ಆರೋಪಿಗಳ ಪಾತ್ರವೂ ಬೆಳಕಿಗೆ ಬಂದಿದೆ. ಈ ಪೈಕಿ ಕೆಲವರು ವಿದೇಶದಲ್ಲಿದ್ದಾರೆ. ಅವರನ್ನು ಬಂಧಿಸುವ ನಿಟ್ಟಿನಲ್ಲಿ ಕಾನೂನು ಕ್ರಮಗಳು ಕೈಗೊಳ್ಳಲಾಗುತ್ತಿದೆ ಎಂದು ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಕೆ-ಕೋಕಾ ಕಾಯ್ದೆಯಡಿ ಸಂಘಟಿತ ಅಪರಾಧ ಸಂಘಟನೆಯ ಪಾಲುದಾರರು ಅಥವಾ ಅದರೊಂದಿಗೆ ಗುರುತಿಸಿಕೊಳ್ಳುವುದು ಕೂಡಾ ಅಪರಾಧವಾಗಿದೆ. ಅದಕ್ಕೂ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಹತ್ಯೆಯಲ್ಲಿ ಪ್ರತಿ ಆರೋಪಿಗಳ ಪಾತ್ರಕ್ಕೆ ಕಠಿಣ ಸೆಕ್ಷನ್‌ಗಳನ್ನು ಹಾಕಲಾಗುವುದು ಎಂದು ತಿಳಿಸಿದ್ದಾರೆ.
