ಮುಡಿಪು ಸಮೀಪದ ಕೈರಂಗಳದ ಶಾರದಾ ಗಣಪತಿ ವಿದ್ಯಾಕೇಂದ್ರ ಪುಣ್ಯಕೋಟಿನಗರದಲ್ಲಿ ನಿನ್ನೆ ಶಾಲಾ ಮಕ್ಕಳಿಂದ ಅದ್ಭುತವಾದ ಯಕ್ಷಗಾನ ಜೋಡಾಟ ನಡೆಯಿತು. “ಶ್ರೀ ದೇವಿ ಮಹಾತ್ಮೆ” ಯಕ್ಷಗಾನ ಬಯಲಾಟವನ್ನು ಮಕ್ಕಳು ಮನೋಜ್ಞವಾಗಿ ಪ್ರದರ್ಶಿಸಿ ಸಾವಿರಾರು ಕಲಾಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದರು.
ಖ್ಯಾತ ಯಕ್ಷಗುರು, ಕಟೀಲು ಮೇಳದ ಕಲಾವಿದರಾದ ಅಶ್ವಥ್ ಮಂಜನಾಡಿ ಅವರ ನಿರ್ದೇಶನದಲ್ಲಿ ಈ ಕಾರ್ಯಕ್ರಮ ಜರುಗಿತು. ಶಾಲಾ ಸಂಚಾಲಕರೂ ಆಗಿ ಕಲಾಪೋಷಕರೂ ಆದ ಟಿ.ಜಿ. ರಾಜಾರಾಮ್ ಭಟ್ ಅವರ ಹುಟ್ಟುಹಬ್ಬದ ಅಂಗವಾಗಿ, ಅವರ ಆಶಯದಂತೆ ಈ ಜೋಡಾಟವನ್ನು ಆಯೋಜಿಸಲಾಗಿತ್ತು.
ಪ್ರಸಿದ್ಧ ಹಿಮ್ಮೇಳವಾದಕರ ಸಹಭಾಗಿತ್ವದಲ್ಲಿ ಯಕ್ಷಗಾನ ಅತ್ಯಂತ ಸುಂದರವಾಗಿ ಮೂಡಿ ಬಂತು. ಈ ಸಂದರ್ಭದಲ್ಲಿ ಕಲಾಪೋಷಕರು ಹಾಗೂ ಕರ್ನಾಟಕ ಸರ್ಕಾರದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಶ್ರೀ ಶ್ಯಾಮ್ ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಕ್ಕಳ ಪ್ರತಿಭೆಯನ್ನು ಕೊಂಡಾಡಿದರು.
ಊರ ಹಾಗೂ ಪರವೂರ ಕಲಾರಸಿಕರು, ಮಕ್ಕಳ ಪೋಷಕರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಈ ಜೋಡಾಟಕ್ಕೆ ಸಾಕ್ಷಿಯಾದರು.