Site icon Ullalavani

ತುಳುನಾಡಿನ ರಾಜಕಾರಣಿಗಳ ದೈವಭಕ್ತಿಯೋ ಅಥವಾ ಡಿಜಿಟಲ್‌ ಪ್ರದರ್ಶನವೋ?

ತುಳುನಾಡಿನ ಸಂಸ್ಕೃತಿಯಲ್ಲಿ ಕೋಲ, ನೇಮ ಎಂಬವು ಕೇವಲ ಆಚರಣೆಗಳಲ್ಲ ಅವು ಜನರ ನಂಬಿಕೆ, ಭಕ್ತಿ ಮತ್ತು ಸಂಪ್ರದಾಯದ ಆತ್ಮ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ರಾಜಕಾರಣಿಗಳು ಈ ಪವಿತ್ರ ಆಚರಣೆಗಳನ್ನು ಸಾಮಾಜಿಕ ಜಾಲತಾಣಗಳ ಪ್ರಚಾರ ವೇದಿಕೆಯಾಗಿ ಬಳಸುತ್ತಿರುವುದು ಗಮನಾರ್ಹವಾಗಿದೆ.

ಫೇಸ್‌ಬುಕ್‌, ವ್ಯಾಟ್‌ಆಪ್‌, ಇನ್‌ಸ್ಟಾಗ್ರಾಂಗಳಲ್ಲಿ ಕೋಲ-ನೇಮಕ್ಕೆ ಹಾಜರಾಗಿರುವ ವಿಡಿಯೋ, ಫೋಟೋಗಳನ್ನು ಹಂಚಿಕೊಳ್ಳುವುದು ತಪ್ಪೇನಲ್ಲ. ಆದರೆ ಅದನ್ನು ಅತಿಯಾಗಿ ಪ್ಲೆಕ್ಸ್‌ ಬ್ಯಾನರ್‌ಗಳೊಂದಿಗೆ, ದೊಡ್ಡ ದೊಡ್ಡ ಕ್ಯಾಪ್ಷನ್‌ಗಳೊಂದಿಗೆ ಪ್ರದರ್ಶಿಸುವುದು“ನಾನೊಬ್ಬ ದೈವಭಕ್ತ” ಎಂಬ ಸಂದೇಶವನ್ನು ಜನರಿಗೆ ತೋರಿಸಲು ಮಾಡುತ್ತಿರುವ ಪ್ರಯತ್ನವೇ? ಅಥವಾ ನಿಜವಾದ ಭಕ್ತಿಯ ಪ್ರತಿಬಿಂಬವೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ.

ನೈಜ ಭಕ್ತಿ ಎಂದರೆ ಮೌನದಲ್ಲೇ ವ್ಯಕ್ತವಾಗುವುದು. ಅದು ಕ್ಯಾಮೆರಾ ಮುಂದೆ ತೋರಿಸಬೇಕಾದ ವಿಷಯವಲ್ಲ. ದೈವದ ಮುಂದೆ ಸಮರ್ಪಣೆ, ನಿಷ್ಠೆ, ಮತ್ತು ಜನಸೇವೆಯ ಮೂಲಕ ವ್ಯಕ್ತವಾಗಬೇಕಾದದ್ದು. ಆದರೆ ಇಂದಿನ ರಾಜಕೀಯದಲ್ಲಿ ಭಕ್ತಿ ಕೂಡ ಒಂದು ಇಮೇಜ್‌ ಬಿಲ್ಡಿಂಗ್‌ ಟೂಲ್ ಆಗಿ ಪರಿಣಮಿಸುತ್ತಿರುವುದು ವಿಷಾದನೀಯ.

ಜನರು ಕೂಡ ಜಾಗೃತರಾಗಬೇಕು. ಚಿತ್ರಗಳು ಮತ್ತು ವಿಡಿಯೋಗಳನ್ನು ನೋಡಿ ಭಕ್ತಿಯ ಅಳತೆಯನ್ನು ಮಾಡಬಾರದು. ರಾಜಕಾರಣಿಯ ನೈಜ ಮುಖವು ಅವನ ಕೆಲಸಗಳಲ್ಲಿ, ಜನಸೇವೆಯಲ್ಲಿ, ಮತ್ತು ನೈತಿಕತೆಯಲ್ಲಿ ಕಾಣಿಸಬೇಕು ಪೋಸ್ಟ್‌ಗಳಲ್ಲಿ ಅಲ್ಲ.

ಕೊನೆಗೆ, ದೈವಭಕ್ತಿ ಒಂದು ವೈಯಕ್ತಿಕ ಅನುಭವ. ಅದನ್ನು ಪ್ರಚಾರದ ಸಾಧನವಾಗಿಸಿದಾಗ ಅದರ ಪವಿತ್ರತೆ ಕಡಿಮೆಯಾಗುತ್ತದೆ. ತುಳುನಾಡಿನ ಪಾವನ ಸಂಪ್ರದಾಯಗಳನ್ನು ಕಾಪಾಡುವುದು ನಮ್ಮೆಲ್ಲರ ಹೊಣೆಗಾರಿಕೆ.

Exit mobile version