ಯಾದಗಿರಿ: ಸುರಪುರ ತಾಲ್ಲೂಕಿನ ಶಾಂತಪುರ ಕ್ರಾಸ್ ಸಮೀಪದಲ್ಲಿ ಶುಕ್ರವಾರ ಖಾಸಗಿ ಬಸ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿ, ಕಾರಿನಲ್ಲಿದ್ದ ಒಂದೇ ಕುಟುಂಬದ ಆರು ಮಂದಿ ಸಜೀವ ದಹನವಾಗಿದ್ದಾರೆ. ಗಾಯಗೊಂಡ ಇಬ್ಬರು ಮಕ್ಕಳು ಗಂಭೀರ ಸ್ಥಿತಿಯಲ್ಲಿದ್ದಾರೆ.
ಮೃತರು ರಾಯಚೂರು ಜಿಲ್ಲೆಯ ಸಿರವಾರ ಮೂಲದವರಾಗಿದ್ದಾರೆ. ಶರಣಪ್ಪ, ಕೃಷ್ಣ, ಅನಂತಕಲಾ ಸೇರಿ ಆರು ಮಂದಿ ಸಜೀವ ದಹನವಾಗಿದ್ದಾರೆ. ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಸ್ಪಿ ಪೃಥ್ವಿಕ್ ಶಂಕರ್ ತಿಳಿಸಿದರು. ಮೂವರು ಮಕ್ಕಳು ಸೇರಿದಂತೆ ಒಟ್ಟು ಎಂಟು ಮಂದಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಬಸ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕ್ಷಣಾರ್ಧದಲ್ಲಿ ಎರಡೂ ವಾಹನಗಳಿಗೆ ಬೆಂಕಿ ತಗುಲಿ ಅನಾಹುತ ಸಂಭವಿಸಿದೆ ಎಂದರು. ಡಿಕ್ಕಿಯ ತೀವ್ರತೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಸ್ಥಳದಲ್ಲೇ ಸಜೀವವ ದಹನಗೊಂಡಿದ್ದು, ಗುರುತಿಸಲು ಸಹ ಸಾಧ್ಯವಾಗದ ಸ್ಥಿತಿಗೆ ದೇಹಗಳು ಕರಕಲಾಗಿವೆ. ಬಸ್ ಕೂಡ ಬೆಂಕಿಗಾಹುತಿಯಾಗಿದ್ದು, ಪ್ರಯಾಣಿಕರಲ್ಲಿ ಭೀತಿಯ ವಾತಾವರಣ ಉಂಟಾಯಿತು ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.