ಕಾಸರಗೋಡು: ಇತಿಹಾಸ ಪ್ರಸಿದ್ಧ ಕಾರಣಿಕ ಕ್ಷೇತ್ರವಾಗಿರುವ ರಾಮದಾಸನಗರದ ಕೂಡ್ಲು ಶ್ರೀ ಚಾಮುಂಡೇಶ್ವರಿ ಕಾಲಭೈರವ ದೇವಸ್ಥಾನದ ವಾರ್ಷಿಕ ಶುದ್ದಿ ಕಲಶ ಪ್ರತಿಷ್ಠಾ ಮಹೋತ್ಸವ ಇದೇ ಏಪ್ರಿಲ್ 19ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ತಂತ್ರಿವರ್ಯರಾದ ಬ್ರಹ್ಮಶ್ರೀ ವಿಷ್ಣು ಪ್ರಕಾಶ ಪಟ್ಟೇರಿ ಕಾವುಮಠ ಅವರ ಮಾರ್ಗದರ್ಶನದಲ್ಲಿ ನಡೆಯಲಿರುವ ಈ ಮಹೋತ್ಸವದಲ್ಲಿ ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳ ಭಕ್ತರು ಹಾಗೂ ಆಸ್ತಿಕ ಮಹಾಜನರು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಧಾರ್ಮಿಕ ಹಾಗೂ ತಾಂತ್ರಿಕ ಸಂಪ್ರದಾಯದಂತೆ ನಡೆಯುವ ಕಾರ್ಯಕ್ರಮಗಳ ವಿವರ ಹೀಗಿದೆ:
ಬೆಳಿಗ್ಗೆ 7.00ಕ್ಕೆ ಗಣಪತಿ ಹೋಮ, 9.30ಕ್ಕೆ ತಂತ್ರಿಗಳ ನೇತೃತ್ವದಲ್ಲಿ ಕಲಶ ಪೂಜೆ, ಮಧ್ಯಾಹ್ನ 12.00ಕ್ಕೆ ವಾರ್ಷಿಕ ಶುದ್ದಿ ಕಲಶ ಪ್ರತಿಷ್ಠಾ ಮಹೋತ್ಸವ ಮತ್ತು ಮಹಾಪೂಜೆ, ಬಳಿಕ ಶ್ರೀದೇವಿಯ ದರ್ಶನ ಸೇವೆ ನಡೆಯಲಿದೆ. ಮಧ್ಯಾಹ್ನ 1.30ರಿಂದ ಅನ್ನಪ್ರಸಾದ ವಿತರಣೆ ನಡೆಯಲಿದ್ದು, ಸಂಜೆ 7.00ರಿಂದ ಕೂಡ್ಲು ಶ್ರೀ ಚಾಮುಂಡೇಶ್ವರಿ ಭಜನಾ ಸಂಘದ ವತಿಯಿಂದ ಭಜನಾ ಸಂಕೀರ್ತನೆ ನಡೆಯಲಿದೆ.
ಈ ಸಂದರ್ಭದಲ್ಲಿ ಹೂವಿನ ವಿಶೇಷ ಅಲಂಕಾರ ಪೂಜೆಯನ್ನು ಭಕ್ತರ ಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ. ಮಹೋತ್ಸವದಂದು ಮೂಡುಬಿದ್ರೆಯ ಪ್ರಕಾಶ ರಂಜಿನಿ ಹಾಗೂ ಪ್ರಜ್ವಿನಿ ವಂದನ್ ಬೇಕಲ್ ಅವರು ಅನ್ನದಾನ ಸೇವೆಯನ್ನು ನೀಡಲಿದ್ದಾರೆ.
ದೇವಸ್ಥಾನದ ಭಂಡಾರ ಮನೆಯ ಆಡಳಿತ ಮೋಕ್ತೇಸರ ಕೆ. ಲೀಲಾಧರ ಕೂಡ್ಲು, ಸೇವಾ ಸಮಿತಿ ಅಧ್ಯಕ್ಷ ಪಾತ್ರಿ ಮೋಹನ ಕೂಡ್ಲು ಕುಂಬಳೆ, ಪ್ರಧಾನ ಅರ್ಚಕ ಶ್ರೀಪತಿ ಅಡಿಗ ಹಾಗೂ ಕೆ. ಉದಯಕುಮಾರ್ ಅಂಬಿಕಾರೋಡ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಮನಾರ್ಹವಾಗಿ, ದೇವಸ್ಥಾನದ ಪುನರ್ ನಿರ್ಮಾಣವನ್ನು ಕೀರ್ತಿಶೇಷ ಪೊಲೀಸ್ ಸರ್ಕಲ್ ಇನ್ಸಪೆಕ್ಟರ್ ಕೆ. ವೆಂಕಟ್ರಮಣ ಕೂಡ್ಲು ಅಂಬಿಕಾ ರೋಡ್ ಅವರು ನೆರವೇರಿಸಿದ್ದರು.