Site icon Ullalavani

ಕೊರಗಜ್ಜನ ಆದಿಕ್ಷೇತ್ರಕ್ಕೆ “ನಮ್ಮ ನಡೆ, ನಮ್ಮ ಅಂಬೋಣ” ಎಂಬ ಭಾವನೆ ಜನರಲ್ಲಿ ಗಾಢವಾಗಿದೆ : ಕೃಷ್ಣ ಅಡಿಗ

ಕುತ್ತಾರು: ಇಂದಿನ ಕಾಲಘಟ್ಟದಲ್ಲಿ ಸಂಸ್ಕಾರವನ್ನು ದೈವ ನರ್ತಕರಿಂದ ಕಲಿಯುವ ಅಗತ್ಯತೆ ಹೆಚ್ಚಾಗಿದೆ. ತುಳುನಾಡಿನ ಆಚಾರ-ವಿಚಾರಗಳಲ್ಲಿ ಕೊರಗಜ್ಜನಿಗೆ ವಿಶೇಷ ಸ್ಥಾನವಿದ್ದು, “ನಮ್ಮ ನಡೆ, ನಮ್ಮ ಅಂಬೋಣ” ಎಂಬ ಭಾವನೆ ಜನಮನಗಳಲ್ಲಿ ಗಾಢವಾಗಿದೆ. ಕೊರಗಜ್ಜನು ಎಲ್ಲರ ದೈವವಾಗಿದ್ದು, ಜಾತಿ-ಭೇದಗಳ ಗಡಿಯಲ್ಲಿ ಸೀಮಿತವಾಗದ ಆಧ್ಯಾತ್ಮಿಕ ಶಕ್ತಿಯ ಸಂಕೇತವಾಗಿದ್ದಾರೆ ಎಂದು ಕದ್ರಿ ಶ್ರೀ ಮಂಜುನಾಥ ಕ್ಷೇತ್ರದ ಪ್ರಧಾನ ಅರ್ಚಕ ಕೃಷ್ಣ ಅಡಿಗ ಅಭಿಪ್ರಾಯಪಟ್ಟರು.


ವಿಶ್ವ ಹಿಂದೂ ಪರಿಷತ್‌ ಉಳ್ಳಾಲ ಪ್ರಖಂಡದ ವತಿಯಿಂದ ಹಿಂದೂ ಸಮಾಜದ ಐಕ್ಯತೆ ಮತ್ತು ಲೋಕಕಲ್ಯಾಣಾರ್ಥವಾಗಿ ಶ್ರೀ ಕ್ಷೇತ್ರ ಕದ್ರಿಯಿಂದ ಕುತ್ತಾರು ದೆಕ್ಕಾಡುವಿನ ಕೊರಗಜ್ಜನ ಆದಿಕ್ಷೇತ್ರಕ್ಕೆ ಹಮ್ಮಿಕೊಳ್ಳಲಾದ 6ನೇ ವರ್ಷದ ಕುತ್ತಾರು ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ ಸಮಾರೋಪ ಸಮಾರಂಭದ ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.


ಜಾತಿ ಎಂಬುದು ಯಾರನ್ನೂ ಕಡಿಮೆ ಮಾಡುವುದಲ್ಲ, ಎಲ್ಲರೂ ಶ್ರೇಷ್ಠರು, 16 ವರ್ಗಗಳ ಜನರೂ ಸಮಾನರು.ಜಾತಿಯ ಗಡಿಯೊಳಗೆ ಸಮಾಜವನ್ನು ಕಟ್ಟಿಹಾಕಬಾರದು, ಎಲ್ಲರಿಗೂ ಸಮಾನ ಅವಕಾಶ ಮತ್ತು ಗೌರವ ದೊರಕಬೇಕು. ದೈವತ್ವವನ್ನು ಪಡೆಯುವುದು ಸುಲಭವಲ್ಲ, ಅದು ಜೀವನದಲ್ಲಿ ಮಾಡಿದ ಸಾಧನೆ, ತ್ಯಾಗ ಮತ್ತು ಸತ್ಯನಿಷ್ಠೆಯಿಂದ ದೊರೆಯುತ್ತದೆ. ಕೊರಗಜ್ಜನ ಮಹತ್ವವು ನಾಟಕ ಮತ್ತು ಯಕ್ಷಗಾನಗಳಲ್ಲಿಯೂ ಅನಾವರಣಗೊಂಡಿದ್ದು, ಜನಪದ ಸಂಸ್ಕೃತಿಯಲ್ಲಿ ಆತನ ಪ್ರಭಾವ ಸ್ಪಷ್ಟವಾಗಿ ಕಾಣಿಸುತ್ತದೆ. ಜೀವನದಲ್ಲಿ ಮಾಡಿದ ಸಾರ್ಥಕ ಸಾಧನೆಗಳೇ “ಅಜ್ಜ” ಎಂಬ ಗೌರವಕ್ಕೆ ಕಾರಣವಾಗುತ್ತವೆ ಎಂಬ ಭಾವನೆ ಜನರಲ್ಲಿ ಬೇರೂರಿದೆ. ಪ್ರತಿಯೊಂದು ವೃತ್ತಿಯೂ ಗೌರವನೀಯ. ಪೊಲೀಸ್‌, ನರ್ಸ್‌, ಪೌರಕಾರ್ಮಿಕರು ಗೌರವ ಸಮಾನರು.ತಾಯಿಗಿಂತ ದೊಡ್ಡ ದೇವರು ಯಾರೂ ಇಲ್ಲ; ಪೋಷಕರನ್ನು ತಿರಸ್ಕರಿಸಿ ದೇವರ ಆರಾಧನೆ ಮಾಡಿದರೆ ಅದಕ್ಕೆ ಫಲವಿಲ್ಲ. ದೇವ, ದೈವ ಮತ್ತು ದೇಶವನ್ನು ನಿಂದಿಸುವವರಿಗೆ ಮುಕ್ತಿ ಇಲ್ಲ ಎಂಬ ನಂಬಿಕೆಯಿದೆ. ಸಾಮಾಜಿಕ ಮತ್ತು ಜಾತಿ ವಿಚಾರಗಳಲ್ಲಿ ಸಹಬಾಳ್ವೆ, ಕೊಡು-ಕೊಳ್ಳುವಿಕೆ ಮುಖ್ಯವಾಗಿದ್ದು, ಕೇವಲ ಪಡೆಯುವ ಮನೋಭಾವವನ್ನು ತೊರೆದು ಪರಸ್ಪರ ಸಹಕಾರದ ಮನಸ್ಥಿತಿಯನ್ನು ಬೆಳೆಸಬೇಕು. ಮನೆಯೊಳಗೆ ಮಾತ್ರ ಬ್ರಾಹ್ಮಣ” ಎಂಬ ಅಭಿಪ್ರಾಯದ ಮೂಲಕ ವ್ಯಕ್ತಿಯ ಮೌಲ್ಯ ನಡೆ-ನುಡಿಗಳಲ್ಲಿ ಇರಬೇಕು. ಭಾರತೀಯ, ಕನ್ನಡಿಗ, ತುಳುವ ಎಂಬ ಗುರುತಿನೊಂದಿಗೆ ಬದುಕುವ ಹೆಮ್ಮೆ ಬೆಳೆಸಿಕೊಳ್ಳಬೇಕು. ದೈವಾರಾಧನೆ ಉಳಿಯಲು ಗುತ್ಥು-ಬರಿಕೆಯವರ ಪಾತ್ರ ಮಹತ್ವದ್ದು, ಕ್ಷೇತ್ರಗಳ ನಿರ್ವಹಣೆಯಲ್ಲಿ ಅವರ ಕೊಡುಗೆ ಅಪಾರವಾಗಿದೆ. ಸ್ಥಳದಾನ ಮಾಡುವವರಿಗೂ ವಿಶೇಷ ಗೌರವ ನೀಡಬೇಕಿದೆ. ತುಳುನಾಡಿನ ಹೆಮ್ಮೆ, ಅದರ ಸಂಸ್ಕೃತಿ ಮತ್ತು ದೈವ ಆರಾಧನೆಯ ಮಹತ್ವವನ್ನು ಉಳಿಸಿಕೊಳ್ಳುವುದು ನಮ್ಮ ಹೊಣೆಗಾರಿಕೆ. ಕೊರಗಜ್ಜನ ಆರಾಧನೆ ಕೇವಲ ಭಕ್ತಿಗೆ ಸೀಮಿತವಲ್ಲದೆ, ಸಮಾನತೆ, ಸಂಸ್ಕಾರ, ಪರಿಶ್ರಮ, ಕುಟುಂಬ ಮೌಲ್ಯಗಳು ಮತ್ತು ಸಾಮಾಜಿಕ ಜಾಗೃತಿಯನ್ನು ಒಳಗೊಂಡ ಜೀವನ ತತ್ವಗಳನ್ನು ಸಾರುವ ಶಕ್ತಿಯಾಗಿದೆ ಎಂದರು.


ವಿ.ಹಿಂ.ಪ ದಕ್ಷಿಣ ಪ್ರಾಂತದ ಸಹ ಕಾರ್ಯದರ್ಶಿ ಶರಣ್‌ ಪಂಪ್‌ ವೆಲ್‌ ಮಾತನಾಡಿ, ಹಿಂದೂ ದೇವಸ್ಥಾನಗಳಿಗೆ ಎಲ್ಲ ಧರ್ಮದವರನ್ನೂ ಆಹ್ವಾನಿಸುವ ಮನೋಭಾವವಿದ್ದರೂ, ಕರ್ನಾಟಕದ ಕೆಲವು ಕಡೆಗಳಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗುತ್ತಿರುವುದು ವಿಷಾದನೀಯ. ಹಿಂದೂಗಳೊಳಗೆ ಜಾತಿಗೆ ಯಾವುದೇ ಸ್ಥಾನವಿಲ್ಲ, ಎಲ್ಲರೂ ಸಮಾನರು. ಪ್ರತಿಯೊಬ್ಬರಿಗೂ ಮುಕ್ತವಾದ ಅವಕಾಶ ದೊರಕಬೇಕು. ಬಾವಿಯಿಂದ ನೀರು ತೆಗೆದುಕೊಳ್ಳುವುದರಿಂದ ಹಿಡಿದು ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸುವವರೆಗೂ ಎಲ್ಲರಿಗೂ ಸಮಾನ ಹಕ್ಕು ಇರಬೇಕು. ಇಂತಹ ಸಾಮಾಜಿಕ ಸಮಾನತೆ ಹಾಗೂ ಧಾರ್ಮಿಕ ಜಾಗೃತಿಯ ಉದ್ದೇಶದಿಂದ ವಿಶ್ವ ಹಿಂದೂ ಪರಿಷತ್ ಕಾರ್ಯನಿರ್ವಹಿಸುತ್ತಿದೆ. ಹಿಂದೂ ಧರ್ಮದೊಳಗಿನ ಯುವಕ-ಯುವತಿಯರ ನಡುವಿನ ಪ್ರೇಮ ಸಂಬಂಧಕ್ಕೆ ವಿರೋಧಿಸುವುದು ಒಂದೆಡೆಯಾದಲ್ಲಿ, ಇತರೆ ಧರ್ಮದ ಯುವಕರನ್ನು ಹಿಂದೂ ಯುವತಿಯರು ವಿವಾಹವಾದರೆ ಬೆಂಬಲಿಸುವ ಮನೋಭಾವದವರು ಹಲವರಿದ್ದಾರೆ. ಆದರೆ ವಿ.ಹಿಂ.ಪ “ಲವ್ ಜಿಹಾದ್” ವಿರುದ್ಧ ನಿರಂತರ ಹೋರಾಟದಲ್ಲಿರುತ್ತದೆ. ತುಳುನಾಡು ದೈವಗಳ ನಾಡಾಗಿದ್ದು, ಇಲ್ಲಿ ಮಣ್ಣಿನ ಪ್ರತಿಯೊಂದು ಕಣದಲ್ಲೂ ಕಾರಣಿಕ ಶಕ್ತಿ ನೆಲೆಸಿದೆ ಎಂಬ ನಂಬಿಕೆ ಇದೆ. ಕೊರಗಜ್ಜನು ಕೇವಲ ದೈವ ಆರಾಧನೆಗೆ ಸೀಮಿತವಾಗಿಲ್ಲ; ಅನ್ಯಾಯಕ್ಕೊಳಗಾದವರಿಗೆ ನ್ಯಾಯ ನೀಡುವ, ನಂಬಿದವರನ್ನು ಎಂದಿಗೂ ಕೈಬಿಡದ ಸತ್ಯದ ಸಂಕೇತವಾಗಿ ಹಿರಿಯರು ವಿವರಿಸುತ್ತಾರೆ. ಲೋಕದ ಕಲ್ಯಾಣವೇ ವಿ.ಹಿಂ.ಪ ಉದ್ದೇಶವಾಗಿದ್ದು, ಜಗತ್ತಿಗೆ ಒಳ್ಳೆಯದು ಆಗಬೇಕು ಎಂಬುದು ಮುಖ್ಯ ಸಂದೇಶ. ತೊಂದರೆ ನೀಡುವವರಿಗೂ ಸಹ ಒಳ್ಳೆಯದೇ ಆಗಲಿ ಎಂಬ ವಿಶಾಲ ಮನೋಭಾವವನ್ನು ಪ್ರತಿಪಾದಿಸಲಾಗುತ್ತಿದೆ. ಹಿಂದೂಗಳ ಸಂಘಟನೆ ಅಗತ್ಯವಾಗಿದ್ದು, ಅಮೆರಿಕಾ, ಇಂಗ್ಲೆಂಡ್, ಬ್ರಿಟನ್ ಸೇರಿದಂತೆ ಜಗತ್ತಿನಾದ್ಯಂತ ಹಿಂದೂಗಳನ್ನು ಒಗ್ಗೂಡಿಸುವ ಕಾರ್ಯ ನಡೆಯುತ್ತಿದೆ. ಸಮಾನತೆ ಎಂಬುದು ಪ್ರಮುಖ ತತ್ವವಾಗಿದ್ದು, ಜಗತ್ತಿನ ಹಿಂದೂಗಳು ಒಂದೇ ಎಂಬ ಸಂದೇಶ ನೀಡಲಾಗುತ್ತಿದೆ. ಈ ಕಾರ್ಯಕ್ರಮಗಳು ಕೇವಲ ಭಕ್ತಿಗೆ ಸೀಮಿತವಾಗಿಲ್ಲ; ಹಿಂದೂ ಸಮಾಜದ ರಕ್ಷಣೆಗೆ ಜಾಗೃತಿ ಮೂಡಿಸುವ ಕಾರ್ಯವೂ ಆಗಿವೆ. ಯಾರನ್ನೂ ವಿಶೇಷವಾಗಿ ಆಹ್ವಾನಿಸುವ ಅವಶ್ಯಕತೆ ಇಲ್ಲ, ವಿರೋಧಿಸುವವರೇ ಧರ್ಮದ ಜಾಗೃತಿಯ ಅರ್ಥವನ್ನು ತಿಳಿದುಕೊಳ್ಳಬೇಕು. ದೈವಾರಾಧನೆಯ ಸಂಸ್ಕೃತಿ ಧರ್ಮ ಮತ್ತು ಸತ್ಯದ ಮಾರ್ಗದಲ್ಲಿ ನಡೆಯಬೇಕು , ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಮತ್ತು ಡ್ರಗ್ಸ್ ಎಂಬ ಅಪಾಯದಿಂದ ಯುವ ಸಮುದಾಯವನ್ನು ದೂರವಿಡಬೇಕೆಂದು ಕರೆ ನೀಡಿದರು.


ಈ ಸಂದರ್ಭ ವಿ.ಹಿಂ.ಪ ಉಳ್ಳಾಲ ನಗರ ಪ್ರಖಂಡ ಅಧ್ಯಕ್ಷ ನಾರಾಯಣ ಕುಂಪಲ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕುತ್ತಾರುಗುತ್ತು ಜಯರಾಮ ಶೆಟ್ಟಿ, ಬೊಳ್ಯಗುತ್ತು ವಿನೋದ್‌ ಶೆಟ್ಟಿ, ರತ್ನಾಕರ ಕಾವ, ದೇವಿಪ್ರಸಾದ್‌ ಶೆಟ್ಟಿ ಮಾಗಣತ್ತಡಿ, ವಿ.ಹಿಂ.ಪ ಮಂಗಳೂರು ವಿಭಾಗ ಸಹಕಾರ್ಯದರ್ಶಿ ಶಿವಾನಂದ ಮೆಂಡನ್‌, ಕರ್ನಾಟಕ ದಕ್ಷಿಣ ಪ್ರಾಂತ ಬಜರಂಗದಳ ಸಹಸಂಯೋಜಕ ಭುಜಂಗ ಕುಲಾಲ್‌, ವಿ.ಹಿಂ.ಪ ದಕ್ಷಿಣ ಪ್ರಾಂತ ಸಹಸೇವಾ ಪ್ರಮುಖ್‌ ಗೋಪಾಲ್‌ ಕುತ್ತಾರ್‌, ಮಂಡಲ ಸಹಕಾರ್ಯವಾಹ ಶಿವಾನಂದ ಮೆಂಡನ್‌, ಬಜರಂಗದಳ ಸಂಚಾಲಕ ಭುಜಂಗ ಕುಲಾಲ್‌ ಉಪಸ್ಥಿತರಿದ್ದರು.


ನಮ್ಮ ನಡೆ ಆಯೋಜನಾ ಸಮಿತಿಯ ಅಧ್ಯಕ್ಷರಾದ ಪ್ರವೀಣ್‌ ಕುತ್ತಾರ್‌ ಸ್ವಾಗತಿಸಿದರು. ಆಶೀಕ್‌ ಮಾಡೂರು ಮತ್ತು ನಿಖಿಲ್‌ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್‌ ಬಸ್ತಿ ವಂದಿಸಿದರು.

Exit mobile version