ಕೊಣಾಜೆ: ಪ್ಲಾಸ್ಟಿಕ್ ತ್ಯಾಜ್ಯ ಸಮಸ್ಯೆಯ ಬಗ್ಗೆ ಈಗಾಗಲೇ ಸಮಾಜದಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದ್ದರೂ ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಎಸೆಯುವರ ಸಂಖ್ಯೆ ಹೆಚ್ಚುತ್ತಿದ್ದು, ಇದಕ್ಕಾಗಿ ಕೊಣಾಜೆ ಗ್ರಾಮ ಪಂಚಾಯತ್ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದು, ತ್ಯಾಜ್ಯ ಎಸೆಯುವವರ ವಿರುದ್ದ ಎಫ್ಐಆರ್ ಹಾಗೂ ಐದು ಸಾವಿರ ರೂ ದಂಡ ವಿಧಿಸಲಾಗುವುದು ಜೊತೆಗೆ ಪ್ಲಾಸ್ಟಿಕ್ ಎಸೆಯುವರನ್ನು ಪತ್ತೆಹಚ್ಚಿದವರಿಗೆ ಬಹುಮಾನ ಕೊಡುವ ಯೋಜನೆಯನ್ನು ರೂಪಿಸಲಾಗಿದೆ ಎಂದು ಕೊಣಾಜೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಜನಿ ಅವರು ಹೇಳಿದರು.
ಅವರು ಗುರುವಾರ ಮುಡಿಪುವಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ ಎನ್ ಎಸ್ ವಿದ್ಯಾರ್ಥಿಗಳಿಂದ ಕೊಣಾಜೆ ಗ್ರಾಮದ ನಡುಪದವಿನ ಸಸ್ಯೋದ್ಯಾನದ ಬಳಿ ನಡೆದ ಪ್ಲಾಸ್ಟಿಕ್ ತ್ಯಾಜ್ಯ ಸ್ವಚ್ಛತೆ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮುಖಂಡರಾದ ನಾಸೀರ್ ಕೆಕೆಎಸ್ ಅವರು ಮಾತನಾಡಿ, ಸ್ವಚ್ಚತಾ ಜಾಗೃತಿ ನಮ್ಮ ಪರಿಸರದಲ್ಲಿ ಮಾತ್ರವಲ್ಲ ಇಡೀ ಜಿಲ್ಲೆಯಲ್ಲಿ ಆಂದೋಲನದ ರೀತಿಯಲ್ಲಿ ಆಗಬೇಕಿದೆ. ಇಂತಹ ಆಂದೋಲನದಲ್ಲಿ ಎನ್ ಎಸ್ ಎಸ್ ವಿದ್ಯಾರ್ಥಿಗಳ ಪಾತ್ರ ಮಹತ್ವವಾದುದು ಎಂದರು.
ಮುಡಿಪು ಕಾಲೇಜಿನ ಎನ್ ಎಸ್ ಎಸ್ ಶಿಬಿರಾಧಿಕಾರಿ ತನುಜಾ ಅವರು ಮಾತನಾಡಿ, ಪರಿಸರ ಸ್ವಚ್ಚತೆಯ ಬಗ್ಗೆ ಪ್ರತಿಯೊಬ್ಬರಲ್ಲೂ ಸ್ವಯಂ ಜಾಗೃತಿ ಮೂಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಕೊಣಾಜೆ ಪಂಚಾಯತಿ ಕಾರ್ಯದರ್ಶಿ ಚಿತ್ರಾ , ಮುಖಂಡರಾದ ಜಗದೀಶ್ ಆಳ್ವ ಕುವೆತ್ತಬೈಲ್, ಮಂಗಳೂರು ವಿವಿಯ ಗಿರೀಶ್ ಮಯ್ಯ, ನವೀನ್ ಚಂದ್ರ, ಸ್ಥಳೀಯರಾದ ಇಸ್ಮಾಯಿಲ್ ನಡುಪದವು, ಜಗದೀಶ್ ನಡುಪದವು, ಅಬ್ದುಲ್ ಅಝೀಜ್, ವಿಶು, ಅಶ್ರಫ್, ತಾರನಾಥ, ಹಸೈನಾರ್ ಕಲ್ಲರ್ಬೆ ಮೊದಲಾದವರು ಉಪಸ್ಥಿತರಿದ್ದರು.
ಪತ್ರಕರ್ತ ಸತೀಶ್ ಕೊಣಾಜೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿವಪ್ರಕಾಶ್ ಭಟ್ ವಂದಿಸಿದರು.