ಬಂಟ್ವಾಳ ; ಸಾಮಾನ್ಯವಾಗಿ ಚುನಾವಣೆ ಸಮೀಪಿಸುತ್ತಿದ್ದರು ಮತದಾರರು ಮತಹಾಕುವಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರುವುದಿಲ್ಲ. ಕೆಲವರು ಉತ್ಸಾಹದಿಂದ ಮತ ಹಾಕಿದರೆ ಇನ್ನು ಕೆಲವರು ಯಾರಪ್ಪ ಹೋಗುವುದು ಅಷ್ಟು ದೂರ ಎಂಬ ಭಾವನೆಯಿಂದ ಮನೆಯಲ್ಲಿಯೇ ಉಳಿದುಬಿಡುತ್ತಾರೆ. ಆದರೆ ಈ ಬಾಲಕಿಯೋರ್ವಳು ಮತದಾರರನ್ನು ಚುನಾವಣಾ ಪ್ರಕ್ರಿಯೆಯ ಭಾಗವಾಗಿಸಲು ವಿಶಿಷ್ಟ ಜಾಗೃತಿಯನ್ನು ಮೂಡಿಸುತ್ತಿದ್ದಾಳೆ.
ಹೌದು, ಬಂಟ್ವಾಳ ತಾಲೂಕಿನ 11 ವರ್ಷದ ಈ ಪುಟ್ಟ ಹುಡುಗಿ ಚುನಾವಣೆಯ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸಲು ಮಂಜೇಶ್ವರ, ಕಾಸರಗೋಡು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಂಚರಿಸಿದ್ದಾರೆ. ಐದು ಭಾಷೆಗಳನ್ನು ಕಲಿತಿರುವ ಸನ್ನಿಧಿ ಕಶೆಕೋಡಿ ದೆಹಲಿ, ಗೋವಾ, ಕೇರಳ , ಕರ್ನಾಟಕ ಮುಂತಾದ ರಾಜ್ಯಗಳ ಚುನಾವಣೆಗಳಿಗೂ ಇದೇ ರೀತಿಯ ಕಾರ್ಯದಿಂದ ಪ್ರಶಂಸೆ ಗಳಿಸಿದ್ದಾರೆ. ಕೇರಳ ಚುನಾವಣೆ ಹಿನ್ನಲೆ ಕಾಸರಗೋಡು ಜಿಲ್ಲಾ ಕಲೆಕ್ಟರ್ ಅವರನ್ನು ಭೇಟಿ ಮಾಡಿದ್ದಾರೆ. ಈ ಪುಟ್ಟ ಪೋರಿಯ ಕೆಲಸಕ್ಕೆ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಲೋಕೇಶ್ ಗೌಡ ಕಶೆಕೋಡಿ ಹಾಗೂ ಶೀಲಾವತಿ ದಂಪತಿಯ ಪುತ್ರಿಯಾಗಿರುವ ಸನ್ನಿಧಿ ಕಶೆಕೋಡಿ ಪ್ರಸ್ತುತ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾಳೆ. ಈ ಬಾಲಕಿಯ ಕಾರ್ಯಕ್ಕೆ ಸಾರ್ವಜನಿಕ ವಲಯಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.