ಕುಂದಾಪುರ, ಏ. 06; ಗೂಡ್ಸ್ ವಾಹನವೊಂದರಲ್ಲಿ ಅಕ್ರಮವಾಗಿ ಎರಡು ಜಾನುವಾರು ಸಾಗಿಸುತ್ತಿರುವುದನ್ನು ಹೊಸಂಗಡಿ ಪೊಲೀಸ್ ಚೆಕ್‌ಪೋಸ್ಟ್‌ನಲ್ಲಿ ಅಮಾಸೆಬೈಲು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರತರಾಗಿದ್ದ ಅಮಾಸೆಬೈಲು ಠಾಣೆಯ ಪೊಲೀಸ್ ಸಿಬ್ಬಂದಿ ಹುಲಿಕಲ್ ಘಾಟಿ ಕಡೆಯಿಂದ ಬರುತ್ತಿದ್ದ ಗೂಡ್ಸ್ ವಾಹನವನ್ನು ತಪಾಸಣೆಗಾಗಿ ತಡೆದರು. ಈ ವೇಳೆ ವಾಹನದಲ್ಲಿ ಎರಡು ಎತ್ತುಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿರುವುದು ಕಂಡುಬಂದಿದೆ.ಪೊಲೀಸರು ಜಾನುವಾರು ಸಾಗಿಸುತ್ತಿದ್ದ ವಾಹನ ಹಾಗೂ ಅದಕ್ಕೆ ಬೆಂಗಾವಲಾಗಿ ಬಂದಿದ್ದ ಕಾರನ್ನು ವಶಪಡಿಸಿಕೊಂಡಿದ್ದು, ಒಟ್ಟು ಮೂರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಾಥಮಿಕ ವಿಚಾರಣೆಯ ವೇಳೆ, ಈ ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.ಮುಷ್ತಾಕ್ ಹುಸೇನ್ ಸಾಬ್ ನದಾಫ್ ಬೆಳಗಾಂ (29), ಸಲೀಂ ಹುಸೇನ್ ಸಾಬ್ ನದಾಫ್ ಬೆಳಗಾಂ (33), ಕಂಡ್ಲೂರು ಜುಮ್ಮಾ ಮಸೀದಿ ರಸ್ತೆಯ ನದೀಮ್ ಅಬ್ದುಲ್ ಖಾದರ್ (34) ಬಂಧಿಸಲಾಗಿದೆ. ಇದೇ ವೇಳೆ ಬೆಂಗಾವಲು ವಾಹನದಲ್ಲಿದ್ದ (ಕಾರು) ಮೊಹಮ್ಮದ್ ನೌಫಿಲ್ ಮತ್ತು ಮತ್ತೊಬ್ಬ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾರೆ.ಈ ಕುರಿತು ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.