ಕೊಣಾಜೆ; ಕೊಣಾಜೆ ಠಾಣಾ ವ್ಯಾಪ್ತಿಯ ಕಂಬಳಪದವು ಬಳಿ ಬೈಕೊಂದಕ್ಕೆ ಲಾರಿಯೊಂದು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ನಡುಪದವು ಅಂಬೇಡ್ಕರ್ ಕಾಲನಿಯ ಬೇಬಿ ಎಂಬವರ ಪುತ್ರ ಸುಶಾಂತ್ (23 ) ಮೃತಪಟ್ಟ ಯುವಕನಾಗಿದ್ದಾನೆ.
ಕಳೆದ ಗುರುವಾರದಂದು ಕಂಬಳಪದವು ಬಳಿ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟಿದ್ದು, ಈ ಸಂದರ್ಭದಲ್ಲಿ ತಲೆಗೆ ಗಂಭೀರವಾದ ಗಾಯವಾಗಿತ್ತು. ಕೂಡಲೇ ಆತನನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾನೆ.
ಹಿಟ್ ಆಂಡ್ ರನ್; ಲಾರಿ ಚಾಲಕ ಬೈಕ್ ಗೆ ಡಿಕ್ಕಿ ಹೊಡೆದರೂ ಲಾರಿಯನ್ನು ನಿಲ್ಲಿಸದೆ ಪರಾರಿಯಾಗಿದ್ದು, ಸಾರ್ವಜನಿಕರು ಪರಿಸರ ನಿವಾಸಿಗಳು ಆಕ್ರೋಶಗೊಂಡಿದ್ದರು. ಬಳಿಕ ಪೊಲೀಸರು ಲಾರಿಯನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದರು.
ಮನೆಗೆ ಆಧಾರಸ್ತಂಭವಾಗಿದ್ದ ಸುಶಾಂತ್ ಕಳೆದ ಹಲವು ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದ. ಬಳಿಕ ಬಡ ಕುಟುಂಬಕ್ಕೆ ಈತನೇ ಆಧಾರಸ್ತಂಭವಾಗಿದ್ದ. ಒಂದೂವರೆ ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿಗೆ ಸಣ್ಣ ಮಗು ಕೂಡಾ ಇದೆ. ಮೃತರ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು.