ಮಂಗಳೂರು, ಎ.4: ಉದ್ಯಮಿ, ಕೊಡುಗೈದಾನಿ, ಸಮಾಜ ಸೇವಕ, ಶಿಕ್ಷಣ ಪ್ರೇಮಿ ಉಳ್ಳಾಲದ ಆಝಾದ್ ನಗರ ನಿವಾಸಿ ಯು.ಎನ್. ಅಬ್ದುಲ್ ರಝಾಕ್ ಹಾಜಿ (80) ಶನಿವಾರ ಅಪರಾಹ್ನ ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.
ಅವರು ಪತ್ನಿ, ನಾಲ್ಕು ಮಂದಿ ಪುತ್ರರು ಮತ್ತು ನಾಲ್ಕು ಮಂದಿ ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಫಹಾದ್ ಫಿಶ್ ಮಿಲ್ ನಡೆಸುತ್ತಿದ್ದ ಅಬ್ದುಲ್ ರಝಾಕ್ ಹಾಜಿ ಸಲಫಿ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ ಹಾಗೂ ಮಂಗಳೂರಿನ ಇಬ್ರಾಹೀಂ ಖಲೀಲ್ ಮಸ್ಜಿದ್ ಹಾಗೂ ಉಳ್ಳಾಲದ ಇಸ್ಲಾಹಿ ಸ್ಕೂಲ್ ಮತ್ತು ಕಲ್ಲಾಪಿನ ಪೀಸ್ ಸ್ಕೂಲ್‌ನ ಸ್ಥಾಪಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಕೊಡುಗೈ ದಾನಿಯಾಗಿದ್ದ ಅಬ್ದುಲ್ ರಝಾಕ್ ಹಾಜಿ ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದರು. ಶಿಕ್ಷಣದ ಬಗ್ಗೆ ಅಪಾರ ಒಲವು ಇತ್ತು. ಅದಕ್ಕಾಗಿ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ನೆರವು ನೀಡುವುದರಲ್ಲಿ ಸದಾ ಮುಂಚೂಣಿಯಲ್ಲಿದ್ದರು.
ಇಂದು ರಾತ್ರಿ 9:30ರ ಸುಮಾರಿಗೆ ಉಳ್ಳಾಲದ ಮುಕ್ಕಚೇರಿಯ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.