ಉಳ್ಳಾಲ: ಶಾಲೆ ಎಂದರೆ ರಾಜಕೀಯ ಜಾಗೃತಿ, ಶೈಕ್ಷಣಿಕ ಮೇಲುಗೈ, ಕ್ರೀಡಾ ಚಟುವಟಿಕೆಗಳು ಎಲ್ಲವೂ ಸಮಾನವಾಗಿ ಬೆಳೆಸುವ ಕೇಂದ್ರವಾಗಿರಬೇಕು. ಅಂತಹ ಸಮಗ್ರ ಅಭಿವೃದ್ಧಿಗೆ ವೇದಿಕೆಯಾದ ತೊಕ್ಕೊಟ್ಟು ವ್ಯಾಯಾಮ ಶಾಲೆಯ 75ನೇ ಸಂವತ್ಸರದ ಸಂಭ್ರಮಾಚರಣೆ ನಿಜಕ್ಕೂ ಅದ್ಭುತವಾಗಿ ನೆರವೇರಿದೆ ಎಂದು ಉಳ್ಳಾಲ ಉಳಿಯದ ಶ್ರೀ ಉಳ್ಳಾಲ್ತಿ ಧರ್ಮರಸರ ಕ್ಷೇತ್ರದ ಧರ್ಮದರ್ಶಿಗಳಾದ ದೇವು ಮೂಲ್ಯಣ್ಣ ಅಭಿಪ್ರಾಯಪಟ್ಟರು.
ತೊಕ್ಕೊಟ್ಟು ಭಟ್ನಗರದ ಶ್ರೀ ಜೈ ವೀರ ಮಾರುತಿ ವ್ಯಾಯಾಮ ಶಾಲೆ ಇದರ ಅಮೃತ ಮಹೋತ್ಸವದ ಪ್ರಯುಕ್ತ ಜರಗಿದ ಹನುಮಾಮೃತ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಚಾಲನೆ ನೀಡಿ, ನೂತನ ಗರಡಿ ಮನೆಯ ಉದ್ಘಾಟನೆ, ಹನುಮಾಮೃತ ಸ್ಮರಣ ಸಂಚಿಕೆ ಬಿಡುಗಡೆ , ಸ್ಥಳೀಯ ಸಂಘ ಸಂಸ್ಥೆಗಳಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಆಂಜನೇಯ ಸ್ವಾಮಿಗೆ ಪ್ರೀತಿಯ ದಿನವಾದ ಗುರುವಾರ ನಡೆದ ಈ ಕಾರ್ಯಕ್ರಮವು ಭಕ್ತಿಭಾವ ಮತ್ತು ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ. ತೊಕ್ಕೊಟ್ಟು ವ್ಯಾಯಾಮ ಶಾಲೆ ಎಂದರೆ ಎಲ್ಲರಿಗೂ ಪರಿಚಿತವಾದ, ವಿಶ್ವಾಸಾರ್ಹ ಸಂಸ್ಥೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಪ್ರತಿಭೆಗಳ ಹೊಳೆ ಇಲ್ಲಿಂದಲೇ ಹರಿದುಬರುತ್ತಿದೆ ಎಂಬುದು ಇದರ ವೈಶಿಷ್ಟ್ಯ.ಶಾಲೆಯ ಅಚ್ಚುಕಟ್ಟಾದ ವ್ಯವಸ್ಥೆ, ಶಿಸ್ತು ಮತ್ತು ಶ್ರದ್ಧೆ ಇದರ ಖ್ಯಾತಿಯನ್ನು ಇನ್ನಷ್ಟು ಎತ್ತಿಹಿಡಿದಿವೆ. ರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರು ಮಾಡಿರುವ ಅನೇಕ ವಿದ್ಯಾರ್ಥಿಗಳು ಈ ಸಂಸ್ಥೆಯ ಹೆಮ್ಮೆಯ ಗುರುತುಗಳಾಗಿದ್ದಾರೆ. ಈ ಶಾಲೆ ಇಂದಿನ ಮಟ್ಟಕ್ಕೆ ಬೆಳೆಯಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರನ್ನೂ ಸ್ಮರಿಸುವುದು ನಮ್ಮ ಕರ್ತವ್ಯ. ಅವರ ಸೇವೆ ಮತ್ತು ತ್ಯಾಗವೇ ಈ ಸಂಸ್ಥೆಯ ಬಲವಾದ ಅಡಿಗಲ್ಲುಗಳಾಗಿವೆ ಎಂದರು.
ಆತ್ಮಶಕ್ತಿ ವಿವಿಧೋದ್ದದೇಶ ಸಹಕಾರಿ ಸಂಘಗಳ ಅಧ್ಯಕ್ಷ ಸಹಕಾರಿ ರತ್ನ ಪುರಸ್ಕೃತ ಚಿತ್ತರಂಜನ್ ಬೋಳಾರ್, ಉಳ್ಳಾಲ ಶ್ರೀ ಭಗವತಿ ಕ್ಷೇತ್ರದ ಅರ್ಚಕ ಮಂಜಪ್ಪ ಕಾರ್ನವರ್, ಉಳ್ಳಾಲ ವಲಯ ಬಂಟರ ಸಂಘದ ಅಧ್ಯಕ್ಷ , ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ರೈ ಕಲ್ಲಿಮಾರು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ದ.ಕ ಜಿಲ್ಲಾ ಅಮೆಚೂರ್ ಕುಸ್ತಿ ಫೆಡರೇಶನ್ ಅಧ್ಯಕ್ಷ ದಿಲ್ ರಾಜ್ ಆಳ್ವ, ಶ್ರೀ ಚೀರುಂಭ ಭಗವತಿ ಕ್ಷೇತ್ರದ ನಿಕಟಪೂರ್ವ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಬಿಜೆಪಿ ಮುಖಂಡ ಚಂದ್ರಶೇಖರ್ ಉಚ್ಚಿಲ್, ಬಂಡಿಕೊಟ್ಯ ಪುನ್ಕೆದಡಿ ಶ್ರೀ ಕೋರ್ದಬ್ಬು ದೈವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಉಳ್ಳಾಲ್, ಕೊಲ್ಯ ಮಠ, ಶ್ರೀ ಮೂಕಾಂಬಿಕಾ ದೇವಸ್ಥಾನದ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಅಸ್ತ್ರ ಗ್ರೂಪ್ ನ ಲಾಂಚುಲಾಲ್ ಕೆ.ಎಸ್, ವಕೀಲ ರಾಮಚಂದ್ರ ಬಿ. ತೊಕ್ಕೊಟ್ಟು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅನಿಲ್ ದಾಸ್, ಉದ್ಯಮಿ ಜಯಂತ್ ಕೊಂಡಾಣ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸುಜಿತ್ ಪ್ರತಾಪ್ ಉಪಸ್ಥಿತರಿದ್ದರು. ವ್ಯಾಯಾಮ ಶಾಲಾ ಶಿಕ್ಷಕ ಜಯಾನಂದ ಅಂಚನ್ ಉಪಸ್ಥಿತರಿದ್ದರು.
ಶಾಲೆಯ ಸ್ಥಾಪಕ ಸದಸ್ಯರುಗಳಾದ ಸುಂದರ್ ಅಮೀನ್ ಮತ್ತು ಭಾಸ್ಕರ್ ಶೆಟ್ಟಿ ಇವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ರೋಹಿತ್ ಉಳ್ಳಾಲ್ ನಿರೂಪಿಸಿ ಸ್ವಾಗತಿಸಿದರು. ಶ್ರೀ ಜೈ ವೀರ ಮಾರುತಿ ವ್ಯಾಯಾಮ ಶಾಲಾ ಟ್ರಸ್ಟ್ ಅಧ್ಯಕ್ಷ ಪುರುಷೋತ್ತಮ್ ಗಟ್ಟಿ ವಂದಿಸಿದರು.