ಉಡುಪಿ, ಏ. 02 ; ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಹಾಡಿಯಂಗಡಿಯಲ್ಲಿ ನಡೆದಿದ್ದ ಜಾನುವಾರು ಕಳ್ಳತನ ಪ್ರಕರಣದಲ್ಲಿ ನ್ಯಾಯಾಲಯದಿಂದ ಜಾಮೀನು ಮೂಲಕ ಹೊರಬಂದಿರುವ ಆರೋಪಿಗಳ ಜಾಮೀನು ರದ್ದುಪಡಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕಳೆದ ವರ್ಷ ಸೆಪ್ಟೆಂಬರ್ 29ರಂದು ಮಧ್ಯರಾತ್ರಿ ಸುಮಾರು 2:15 ಗಂಟೆಗೆ, ಆರೋಪಿಗಳು ಹಾಡಿಯಂಗಡಿಯ ಜಯಶ್ರೀ ಪೂಜಾರಿ ಎಂಬುವವರ ಮನೆಗೆ ನುಗ್ಗಿದ್ದರು. ಜಯಶ್ರೀ ಅವರಿಗೆ ಕತ್ತಿ ತೋರಿಸಿ ಬೆದರಿಕೆ ಹಾಕಿದ ಆರೋಪಿಗಳು, ಕೊಟ್ಟಿಗೆಯಲ್ಲಿದ್ದ ಮೂರು ಜಾನುವಾರುಗಳನ್ನು ಕಳ್ಳತನ ಮಾಡಿ ಬಳಿಕ ಅವುಗಳನ್ನು ಹತ್ಯೆಗೈದಿದ್ದರು ಎನ್ನಲಾಗಿದೆ.ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದು ಪೊಲೀಸರು ಮೊಹಮ್ಮದ್ ಯೂನಿಸ್ (31), ಮೊಹಮ್ಮದ್ ಇಕ್ಬಾಲ್ ಅಲಿಯಾಸ್ ಇಕ್ಕು (29) ಮತ್ತು ಮೊಹಮ್ಮದ್ ನಾಸಿರ್ (28) ಎಂಬುವವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆದರೆ, ನಂತರ ಈ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.ತನಿಖೆಯ ವೇಳೆ ಆರೋಪಿಗಳು ಈ ಕೃತ್ಯವನ್ನು ಸಂಘಟಿತ ರೀತಿಯಲ್ಲಿ ಎಸಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ಪೊಲೀಸರು ಅವರ ವಿರುದ್ಧ ‘ಕೋಕಾ’ ಕಾಯ್ದೆಯಡಿ ಕ್ರಮಕೈಗೊಂಡಿದ್ದಾರೆ. ಜೊತೆಗೆ ಆರೋಪಿಗಳ ಜಾಮೀನು ರದ್ದುಗೊಳಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.ಸದ್ಯ ಪೊಲೀಸರು ಮೊಹಮ್ಮದ್ ಯೂನಿಸ್, ಮೊಹಮ್ಮದ್ ಇಕ್ಬಾಲ್, ಮೊಹಮ್ಮದ್ ನಾಸಿರ್ ಮತ್ತು ಮತ್ತೊಬ್ಬ ಆರೋಪಿ ಶೌಕತ್ ಆಲಿ (36) ಎಂಬುವವರನ್ನು ಪುನಃ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಸ್ತುತ ಎಲ್ಲಾ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.