ಕೊಣಾಜೆ: ಯಕ್ಷಗಾನ ಜನರ ನಡುವೆ ಸಂಭವಿಸುವ ಪುರಾಣಲೋಕ. ಗಾನ, ಕುಣಿತ, ಅಭಿನಯ, ವೇಷವೈಭವದೊಂದಿಗೆ ಬೌದ್ಧಿಕ ಜಿಜ್ಞಾಸೆಗೂ ಮಹತ್ವವಿದೆ. ಕತೆ ಹೇಳುವುದಲ್ಲ. ಬದಲಾಗಿ ಪ್ರಸಂಗವನ್ನು ವಿಶ್ಲೇಷಿಸುವ, ವ್ಯಾಖ್ಯಾನಿಸುವ ಮೂಲಕ ಹೊಸ ಅರ್ಥ ಸಾಧ್ಯತೆಗಳನ್ನು ವಾಚಿಕದಲ್ಲಿ ತರುವುದು ಮುಖ್ಯ. ಯಕ್ಷಗಾನದಲ್ಲಿ ಆಖ್ಯಾನಕ್ಕಿಂತ ವ್ಯಾಖ್ಯಾನ ಮುಖ್ಯ ಎಂದು ಯಕ್ಷಗಾನ ವಿದ್ವಾಂಸ, ಕಲಾವಿದ ಪ್ರೊ.ಎಂ.ಎಲ್ ಸಾಮಗ ಹೇಳಿದರು.
ಇವರು ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಇದರ ವತಿಯಿಂದ ಕಲಾವಿದರ ಯಕ್ಷಪಯಣದ ಸ್ಬಗತ ‘ ಯಕ್ಷಾಯಣ-ದಾಖಲೀಕರಣ’ ಸರಣಿ -10ರ ಕಾರ್ಯಕ್ರಮದಲ್ಲಿ ತಮ್ಮ ಅನುಭವವನ್ನು ಹಂಚಿಕೊAಡರು.
ಜಾಗತಿಕ ರಂಗಭೂಮಿಯಲ್ಕಿ ಯಕ್ಷಗಾನ ಗಟ್ಟಿಯಾಗಿ ನಿಲ್ಲಬೇಕಾದರೆ ಯಕ್ಷಗಾನಕ್ಕೆ ಶೈಕ್ಷಣಿಕ ನೆಲೆಗಟ್ಟು ಕೂಡಾ ಅಗತ್ಯವಾಗಿ ದೊರಕಬೇಕಿದೆ. ಯಕ್ಷಗಾನವನ್ನು ಮುಕ್ತ ಮನಸ್ಸಿನಿಂದ ನೋಡುವ ಮನೋಭಾವ ನಮ್ಮದಾಗಬೇಕು. ತನ್ನ ನೈಪುಣ್ಯತೆಯಿಂದ ಪ್ರೇಕ್ಷಕನ್ನು ಸೆಳೆಯುವುದೇ ಕಲಾವಿದನ ಮೊದಲ ಆಧ್ಯತೆಯಾಗಬೇಕು ಎಂದು ಹೇಳಿದರು.
ತಂದೆ ದೊಡ್ಡ ಸಾಮಗರಿಂದಾಗಿ ಯಕ್ಷಗಾನದ ಆಸಕ್ತಿ ಬೆಳೆಯಿತು. ಜೊತೆಗೆ ಕಲಾವಿದರು ನನ್ನನ್ನು ಗೌರವದಿಂದ ಕಾಣ್ತಾ ಇದ್ದರು. ಕಡತೋಕ ಅವರ ಪದ್ಯಕ್ಕೆ ವೇಷ ಮಾಡಿದ್ದೇನೆ, ಶಂಭು ಹೆಗಡೆ, ಮಹಾಬಲಹೆಗಡೆ , ಕೋಳ್ಯೂರು ರಾಮಚಂದ್ರರಾವ್ ಮೊದಲಾದ ಹಿರಿಯ ಕಲಾವಿದರ ಜೊತೆಯೂ ವೇಷ ಮಾಡಿದ ಸಂತೃಪ್ತಿ ಇದೆ ಎಂದರು.
ಮAಗಳೂರು ವಿವಿಯ ವಿಶ್ರಾಂತ ಕುಲಸಚಿವರಾದ ಕೆ.ರಾಜು ಮೊಗವೀರ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಯಕ್ಷಗಾನ ಸರ್ವಾಂಗೀಣ ಕಲೆಯನ್ನು ಮುಂದಿನ ಪೀಳಿಗೆಗೂ ಸಂಪ್ರದಾಯಬದ್ದವಾಗಿ ದಾಟಿಸುವ ನಿಟ್ಟಿನಲ್ಲಿ ಯಕ್ಷಗಾನ ಕಲಾವಿದರ ದಾಖಲೀಕರಣ ಕಾರ್ಯಕ್ರಮ ಅತ್ಯಂತ ಮಹತ್ವವಾದುದು ಎಂದರು.
ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೆಶಕರಾದ ಡಾ. ಧನಂಜಯ ಕುಂಬ್ಳೆ ಅವರು ಮಾತನಾಡಿ, ಯಕ್ಷಗಾನದ ಅಧ್ಯಯನ ಕೇಂದ್ರದ ಸರಣಿ ಕಾರ್ಯಕ್ರಮದ ರೂಪದಲ್ಲಿ ಹತ್ತು ಜನ ಕಲಾವಿದರ ದಾಖಲೀಕರಣವನ್ನು ಒಂದು ಹಂತದಲ್ಲಿ ಮಾಡಲಾಗಿದ್ದು, ಮಾತುಗಳನ್ನು ಬರಹ ರೂಪಕ್ಕಿಳಿಸಿ ಕೃತಿಯ ರಚನೆಯ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಅರ್ಥಧಾರಿ ಸುಣ್ಣಂಬಳ ಈಶ್ವರ ಭಟ್, ಯಕ್ಷಗಾನ ಅಧ್ಯಯನ ಕೇಂದ್ರದ ಡಾ.ಸತೀಶ್ ಕೊಣಾಜೆ, ಸ್ವಾತಿ ರಾವ್ ಮೊದಲಾದವರು ಉಪಸ್ಥಿತರಿದ್ದರು. ಸಾಯಿಸುಮ ನಾವಡ ಕಾರ್ಯಕ್ರಮ ನಿರೂಪಿಸಿದರು.