ಉಡುಪಿ, ಮಾ. 28 ; ವಿರುದ್ಧ ದಿಕ್ಕಿನಿಂದ ಬಂದ ಕಾರೊಂದು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಣಿಪಾಲದ ಈಶ್ವರನಗರದ ಬಳಿ ತಡರಾತ್ರಿ ನಡೆದಿದೆ.
ಅಪಘಾತದ ಬಳಿಕ ಚಾಲಕ ಕಾರಿನೊಂದಿಗೆ ಪರಾರಿಯಾಗಿದ್ದು, ನಂತರ ಪೊಲೀಸರು ಮಂಚಿ ಕುಮೇರಿ ಬಳಿ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಬೆಳ್ತಂಗಡಿ ಮೂಲದ ವಿನೀಶ್ ಮತ್ತು ವೀರಪ್ಪ ಎಂಬುವವರು ಈಶ್ವರನಗರದ ರೆಸ್ಟೋರೆಂಟ್‌ವೊಂದರಲ್ಲಿ ಕೆಲಸ ಮುಗಿಸಿ ಹಿಂತಿರುಗುತ್ತಿದ್ದರು. ಅವರು ರಸ್ತೆಯ ಡಿವೈಡರ್ ದಾಟಿ ನಡೆದುಕೊಂಡು ಹೋಗುತ್ತಿದ್ದಾಗ ಪೆಟ್ರೋಲ್ ಬಂಕ್ ಕಡೆಯಿಂದ ಈಶ್ವರನಗರದ ಜನನಿ ಲಾಡ್ಜ್ ಕಡೆಗೆ ಅತೀ ವೇಗವಾಗಿ ವಿರುದ್ಧ ದಿಕ್ಕಿನಲ್ಲಿ ಬಂದ ಕಾರು ವೀರಪ್ಪ ಅವರಿಗೆ ಢಿಕ್ಕಿ ಹೊಡೆದಿದೆ.ಢಿಕ್ಕಿಯ ರಭಸಕ್ಕೆ ವೀರಪ್ಪ ಅವರ ತಲೆ, ಕಾಲು ಮತ್ತು ಸೊಂಟದ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ತನಿಖೆಯ ವೇಳೆ ಅಪಘಾತ ಎಸಗಿದ ಕಾರು ಮಂಚಿ ಕುಮೇರಿ ಬಳಿ ಪತ್ತೆಯಾಗಿದ್ದು, ಪೊಲೀಸರು ಅದನ್ನು ವಶಕ್ಕೆ ಪಡೆದಿದ್ದಾರೆ. ಈ ಕಾರು ಶಿವಮೊಗ್ಗ ಜಿಲ್ಲೆಯಲ್ಲಿ ನೋಂದಣಿಯಾಗಿದ್ದು, ಕಾರಿನ ಮಾಲೀಕರನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.