ಕುಂಪಲ: ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (NSS) ಶಿಬಿರವು ಕುಂಪಲ ಸರಕಾರಿ ಶಾಲೆಯಲ್ಲಿ ಆರಂಭಗೊಂಡಿತು.
ಶಿಬಿರವನ್ನು ಮಂಗಳೂರು ರೋಟರಿ ಕ್ಲಬ್‌ನ ಸುಜೀರ್ ಪ್ರಸಾದ್ ನಾಯಕ್ ದೀಪ ಬೆಳಗಿಸಿ ಉದ್ಘಾಟಿಸಿದರು. ಕುಂಪಲ ರೋಟರಿ ಸಮುದಾಯ ದಳದ ಮನವಿಗೆ ಸ್ಪಂದಿಸಿ ಶಾಲೆಗೆ ಬಣ್ಣ (ಪೇಂಟ್) ನೀಡಲಾಗಿದ್ದು, ಅದರ ಕಾಮಗಾರಿಗಳನ್ನು ವಿದ್ಯಾರ್ಥಿಗಳು ಕೈಗೊಳ್ಳುತ್ತಿರುವುದು ಶ್ಲಾಘನೀಯ ಎಂದು ಅವರು ಅಭಿಪ್ರಾಯಪಟ್ಟರು. ಈ ಶಿಬಿರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದ ಅವರು, ಮುಂದಿನ ದಿನಗಳಲ್ಲಿಯೂ ಸೇವಾ ಕಾರ್ಯಗಳಿಗೆ ತಮ್ಮ ಸಹಕಾರ ನಿರಂತರವಾಗಿರಲಿದೆ ಎಂದು ಹೇಳಿದರು.
ಟ್ರಸ್ಟ್‌ನ ಸ್ಥಾಪಕಾಧ್ಯಕ್ಷರಾದ ನಾರಾಯಣ ಕುಂಪಲ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ತಮ್ಮ ಕಾಲೇಜಿಗೆ ಉತ್ತಮ ಹೆಸರು ತಂದುಕೊಡಬಹುದು ಎಂದು ಹೇಳಿದರು. ಜಲ ಸಂರಕ್ಷಣೆ, ವನಮಹೋತ್ಸವ ಹಾಗೂ ಪರಿಸರ ಸಂರಕ್ಷಣೆ ಕಾರ್ಯಗಳ ಮೂಲಕ ರಾಷ್ಟ್ರ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷರು ಹಾಗೂ ಮಾಜಿ ಸೈನಿಕರಾದ ಸುಧಾಕರ ಕುಂಪಲ, ರೋಟರಿ ಕ್ಲಬ್ ಮಂಗಳೂರು ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ, ಶಿಬಿರ ಯಶಸ್ವಿಯಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ಎಸ್. ಇಂಜಗನೆರಿ ಅವರು, ಸಂಸ್ಥೆಯ ಆಡಳಿತ ಮಂಡಳಿಯ ಸಂಪೂರ್ಣ ಸಹಕಾರದಿಂದ ಶಿಬಿರ ಆರಂಭವಾಗಿರುವುದಾಗಿ ತಿಳಿಸಿದರು. ವಿದ್ಯಾರ್ಥಿಗಳು ನಡೆಸುವ ಸೇವಾ ಚಟುವಟಿಕೆಗಳು ಶಾಲೆಯ ಮಕ್ಕಳಿಗೆ ಪ್ರೇರಣೆಯಾಗಲಿವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಸಹಕರಿಸಿದ ಸಂಸ್ಥೆಗಳಾದ ರೋಟರಿ ಕ್ಲಬ್ ಮತ್ತು ಕೇಸರಿ ಮಿತ್ರ ವ್ರಂದಾ ಸೇವಾ ಟ್ರಸ್ಟ್‌ಗಳಿಗೆ ಅಭಿನಂದನೆ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಡಾ. ಪ್ರಶಾಂತ್ ಕುಮಾರ್, ಎನ್‌ಎಸ್‌ಎಸ್ ಶಿಬಿರ ಮೇಲ್ವಿಚಾರಕಿ ಶ್ರೀಮತಿ ರಶ್ಮಿತಾ ಅತಿಥಿಗಳನ್ನು ಸ್ವಾಗತಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್, ಮುಖ್ಯೋಪಾಧ್ಯಾಯಿನಿ ಚಂದ್ರಕಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಉಪನ್ಯಾಸಕಿ ಕುಮಾರಿ ಮಧುರ ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕರಾದ ನಿಖಿಲ್ ಕುಮಾರ್ ವಂದಿಸಿದರು.