Site icon Ullalavani

ಅಕ್ರಮ ಜಾನುವಾರು ಸಾಗಾಟ ಪ್ರಕರಣ; ಇಬ್ಬರ ಬಂಧನ…!!

ಮಂಗಳೂರು, ಮಾ. 21 : ಬಡಗ ಎಡಪದವು ಗ್ರಾಮದ ಸಾಸ್ತಾವು ದೇವಸ್ಥಾನದ ಸಮೀಪ ಫಾರ್ಚೂನರ್ ಕಾರಿನಲ್ಲಿ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳದಿಂದ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಪೆರ್ಮುದೆಯ ಭಟ್ರಕೆರೆ ನಿವಾಸಿಯಾಗಿರುವ, ಪೇಜಾವರ ಕೊಂಚಾರ ಮೂಲದ ನಿಸಾರ್ ಅಲಿಯಾಸ್ ನಿಸಾರುದ್ದೀನ್ ಅಲಿಯಾಸ್ ಪಾರಿವಾಳ ನಿಸಾರ್ (28) ಮತ್ತು ಉಳಾಯಿಬೆಟ್ಟು ಪೆರ್ಮಂಕಿಯ ಅಕ್ಕೋಡಿ ಹೌಸ್ ನಿವಾಸಿ ಮೊಹಮ್ಮದ್ ಜಮಾಲುದ್ದೀನ್ ಅಲಿಯಾಸ್ ಜಮಾಲ್ (24) ಎಂದು ಗುರುತಿಸಲಾಗಿದೆ.ಕಾರೊಂದರಲ್ಲಿ ಜಾನುವಾರುಗಳ ಕಾಲುಗಳನ್ನು ಕಟ್ಟಿ, ಹಿಂಸಾತ್ಮಕವಾಗಿ ತುಂಬಿಕೊಂಡು ಮಾರಾಟಕ್ಕಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮಾರ್ಚ್ 18ರಂದು ಮುಂಜಾನೆ ಸುಮಾರು 4:45 ಗಂಟೆ ವೇಳೆಗೆ ಪೊಲೀಸರಿಗೆ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಬಜಪೆ ಪೊಲೀಸರು ಬಡಗ ಎಡಪದವು ಗ್ರಾಮದ ಸಾಸ್ತಾವು ದೇವಸ್ಥಾನದ ಬಳಿ ವಾಹನವನ್ನು ತಡೆದು ತಪಾಸಣೆ ನಡೆಸಿದಾಗ, ಕಾರಿನೊಳಗೆ ಕಾಲುಗಳನ್ನು ಕಟ್ಟಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ನಾಲ್ಕು ಜಾನುವಾರುಗಳು ಪತ್ತೆಯಾಗಿವೆ. ಈ ವೇಳೆ ಆರೋಪಿಗಳು ಕಾರು ಮತ್ತು ಜಾನುವಾರುಗಳನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದರು.ಕಾರಿನಲ್ಲಿದ್ದ ಒಂದು ತಲ್ವಾರ್ ಮತ್ತು ಕಬ್ಬಿಣದ ರಾಡ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾರು ಸೇರಿದಂತೆ ಒಟ್ಟು 8.42 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ಜಪ್ತಿ ಮಾಡಲಾಗಿದೆ. ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಪತ್ತೆಗಾಗಿ ಪ್ರತ್ಯೇಕ ತಂಡವನ್ನು ರಚಿಸಲಾಗಿದ್ದು, ಹುಡುಕಾಟ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version