ಕೋಟೆಕಾರ್: ಅಲ್ ಹಿದಾಯ ಜುಮಾ ಮಸ್ಜಿದ್‌ನಲ್ಲಿ ಈದ್ ಉಲ್ ಫಿತ್ರ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಬೆಳಿಗ್ಗೆ ನಡೆದ ಈದ್ ನಮಾಝ್‌ನಲ್ಲಿ ಅನೇಕ ಭಕ್ತರು ಭಾಗವಹಿಸಿದರು.
ಮಸೀದಿ ಖತೀಬ್ ಅಬ್ದುಲ್ ಅಝೀಝ್ ಸಅದಿ ಅಲ್ ಅಫ್ಳಲಿ ಅವರು ಈದ್ ನಮಾಝ್ ಖುತುಬಾ ನಿರ್ವಹಿಸಿ, ಈದ್ ಸಂದೇಶ ನೀಡಿದರು. ತಮ್ಮ ಸಂದೇಶದಲ್ಲಿ ಸಹೋದರತ್ವ, ಶಾಂತಿ, ಸೌಹಾರ್ದತೆ ಮತ್ತು ಪರಸ್ಪರ ಪ್ರೀತಿ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ನಮಾಝ್ ನಂತರ ಮಸೀದಿಗೆ ಆಗಮಿಸಿದವರು ಪರಸ್ಪರ ಹಸ್ತಲಾಘವ ಮಾಡಿ ಈದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಈದ್ ಹಬ್ಬದ ಅಂಗವಾಗಿ ಮಸೀದಿ ವಠಾರದಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು.
ಈ ಸಂದರ್ಭದಲ್ಲಿ ಜಮಾಅತ್ ಪದಾಧಿಕಾರಿಗಳು, ಸಮಾಜದ ಮುಖಂಡರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.