ಮಂಗಳೂರು : ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನಿರ್ದೇಶಕರ ಕಚೇರಿಯ ಮೇಲ್ವಿಚಾರಣೆಯನ್ನು ಜಿಪಂ ಸಿಇಒ ಅವರಿಗೆ ವಹಿಸುವ ಸರಕಾರದ ಪ್ರಸ್ತಾವಿತ ಯೋಜನೆಯನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ಮಾ.20ರಿಂದ ನಡೆಯಲಿರುವ ದ್ವಿತೀಯ ಪಿಯು ಮೌಲ್ಯಮಾಪನವನ್ನು ಬಹಿಷ್ಕರಿಸಿ ಮಂಗಳೂರು ಮಿನಿ ವಿಧಾನ ಸೌಧದ ಮುಂದೆ ಪ್ರತಿಭಟನೆ ನಡೆಸುವ ಬಗ್ಗೆ ದ.ಕ. ಜಿಲ್ಲೆಯ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ವಿವಿಧ ಸಂಘಗಳು ಸೋಮವಾರ ತೀರ್ಮಾನ ಕೈಗೊಂಡಿದೆ.
ನಗರದ ರೆಡ್‌ಕ್ರಾಸ್ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ದ.ಕ. ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಡಾ.ನವೀನ್ ಶೆಟ್ಟಿ, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಪಿಯು ವಿಭಾಗದ ಮೇಲೆ ಜಿಪಂ ಸಿಇಒ ಅವರು ಮೇಲ್ವಿಚಾರಣೆ ನಡೆಸುವ ಸಂಭವ ಎದುರಾಗಿದೆ. ಇದು ಎಲ್ಲಾ ಜಿಲ್ಲೆಗಳಿಗೂ ವಿಸ್ತರಣೆಗೊಂಡರೆ ಪದವಿಪೂರ್ವ ಶಿಕ್ಷಣದ ಅಸ್ತಿತ್ವವೇ ಕಳೆದುಹೋಗಲಿದೆ. ಇದರ ವಿರುದ್ದ ಸರಕಾರಿ ಅನುದಾನಿತ ಉಪನ್ಯಾಸಕರ ಜತೆಗೆ ಅನುದಾನರಹಿತ ವಿಭಾಗದ ಎಲ್ಲಾ ಶಿಕ್ಷಕರು ಕೂಡ ಒಗ್ಗಟ್ಟಾಗಿ ಹೋರಾಟ ನಡೆಸಬೇಕಿದೆ. ಹೀಗಾಗಿ ಮೌಲ್ಯಮಾಪನ ಬಹಿಷ್ಕರಿಸಲು ಎಲ್ಲರೂ ಜತೆಯಾಗೋಣ ಎಂದು ಕರೆ ನೀಡಿದರು.
ನಿರ್ಣಯ ಮಂಡಿಸಿ ಮಾತನಾಡಿದ ದ.ಕ. ಉಪನ್ಯಾಸಕರ ಸಂಘದ ಕಾರ್ಯಾಧ್ಯಕ್ಷ ಚಂದ್ರನಾಥ ಎಂ. ಮಾ.17 ರಿಂದ ವೀಕ್ಷಕರು ಮೌಲ್ಯಮಾಪನಕ್ಕೆ ಹೋದರೂ ಕಾರ್ಯ ಪ್ರಾರಂಭ ಮಾಡಬಾರದು. ಮೌಲ್ಯಮಾಪನ ಮುಖ್ಯ ಸ್ಥರೂ ಕಾರ್ಯನಿರ್ವಹಣೆ ಆರಂಭಿಸಬಾರದು. ಮಾ.೨೦ರಿಂದ ಮೌಲ್ಯಮಾಪನ ಕೇಂದ್ರಗಳಿಗೆ ಹೋಗಬೇಕಾಗಿರುವ ದ.ಕ ಜಿಲ್ಲೆಯ ಎಲ್ಲಾ ಉಪನ್ಯಾಸಕರು ನೇರವಾಗಿ ಮಂಗಳೂರಿನ ಮಿನಿವಿಧಾನಸೌಧ ಮುಂದೆ ಜಮಾಯಿಸಿ ಪ್ರತಿಭಟನೆ ಯಲ್ಲಿ ಪಾಲ್ಗೊಳ್ಳಬೇಕು. ಇದರ ಬಗ್ಗೆ ವಿಶೇಷ ಗಮನಹರಿಸಲು ಮೌಲ್ಯಮಾಪನ ಕೇಂದ್ರಕ್ಕೆ ಅನುಗುಣವಾಗಿ ಸಮನ್ವಯ ಸಮಿತಿ ರಚಿಸಲಾಗುವುದು ಎಂದರು. ಕುಪ್ಮಾ ಹಾಗೂ ರುಪ್ಸಾ ಪ್ರಮುಖ ಮಂಜುನಾಥ ರೇವಣ್ಕರ್, ಜಿಲ್ಲಾ ಪ್ರಾಂಶುಪಾಲರ ಸಂಘದ ಮಾಜಿ ಅಧ್ಯಕ್ಷ ಗಂಗಾಧರ ಆಳ್ವ, ರಾಜ್ಯ ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಜಯಾನಂದ ಸುವರ್ಣ, ಉಪನ್ಯಾಸಕರ ಸಂಘದ ಅಧ್ಯಕ್ಷ ಹರಿಪ್ರಕಾಶ್ ಬೈಲಾಡಿ, ಅನುದಾನಿತ ಪ.ಪೂ.ಕಾಲೇಜುಗಳ ನೌಕರರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ ನಾಯಕ್, ಅನುದಾನಿತ ಪಪೂ ಕಾಲೇಜುಗಳ ಉಪನ್ಯಾಸಕರ ಸಂಘದ ಗೌರವಾಧ್ಯಕ್ಷ ವಿಠಲ ಎ. ಮಾತನಾಡಿದರು. ಶಾಲಾ ಶಿಕ್ಷಣ ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರೇಮನಾಥ್ ಶೆಟ್ಟಿ, ಹಿರಿಯ ಪ್ರಾಂಶುಪಾಲೆ ಜಯಶ್ರೀ ಪಿ., ದ.ಕ. ಪ.ಪೂ. ಪ್ರಾಂಶುಪಾಲರ ಸಂಘದ ಕೋಶಾಧಿಕಾರಿ ಎ.ಎಸ್.ಆದರ್ಶ್, ಅತಿಥಿ ಉಪನ್ಯಾಸಕರ ರಾಜ್ಯ ಸಂಘದ ಅಧ್ಯಕ್ಷ ಪದ್ಮಪ್ರಭ ಇಂದ್ರ ಮತ್ತಿತರರು. ದ.ಕ. ಪ.ಪೂ.ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಮಮತಾ ವಂದಿಸಿದರು. ಪ್ರಾಚಾರ್ಯೆ ಶರ್ಮಿಳಾ ಮುಖೇಶ್ ರಾವ್ ಕಾರ್ಯಕ್ರಮ ನಿರೂಪಿಸಿದರು.