Site icon Ullalavani

ಮೂಡುಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ; ದೂರು ದಾಖಲು

ಮೂಡುಬಿದಿರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂದೇಶ್ ಬಿ.ಜಿ. ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿವೆ.

ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಕೋರಿ ಮೂವರು ಮಹಿಳೆಯರು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳು, ಗೃಹ ಸಚಿವರು, ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ), ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಮಹಿಳೆಯೋರ್ವರ ಪತಿಯನ್ನು ಒಂದು ಪ್ರಕರಣದಲ್ಲಿ ಬಂಧಿಸಲಾಗಿತ್ತು. ನಿನ್ನ ಪತಿಯನ್ನು ಬಿಡುಗಡೆ ಮಾಡಬೇಕಾದರೆ ನೀನು ಲೈಂಗಿಕವಾಗಿ ಸಹಕರಿಸಬೇಕು ಎಂದು ಇನ್ಸ್‌ಪೆಕ್ಟರ್ ಪೀಡಿಸಿದ್ದರು. ಜೊತೆಗೆ 25 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಪತಿಯ ವಿರುದ್ಧ ‘ರೌಡಿ ಶೀಟ್’ ತೆರೆಯುವುದಾಗಿ ಬೆದರಿಕೆ ಹಾಕಿದ್ದರು ಎಂದು ಓರ್ವ ಮಹಿಳೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.ಇನ್ಸ್‌ಪೆಕ್ಟರ್ ರಾತ್ರಿ ವೇಳೆ ಕಾಂಪೌಂಡ್ ಗೋಡೆ ಜಿಗಿದು ಮನೆಗೆ ನುಗ್ಗುತ್ತಿದ್ದರು, ಕೈ ಹಿಡಿದು ಎಳೆದಾಡುತ್ತಿದ್ದರು ಮತ್ತು ಬಲವಂತವಾಗಿ ಡ್ಯಾನ್ಸ್ ಮಾಡುವಂತೆ ಪೀಡಿಸುತ್ತಿದ್ದರು. ಈ ಹಿಂದೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿದ್ದಾಗಲೂ ಅವರು ಇದೇ ರೀತಿ ವರ್ತಿಸಿದ್ದರು.

ಪಾಸ್‌ಪೋರ್ಟ್ ಪರಿಶೀಲನೆ ಮತ್ತು ಇತರ ಕೆಲಸಗಳಿಗಾಗಿ ಠಾಣೆಗೆ ಬರುವ ಮಹಿಳೆಯರಿಗೂ ಇವರು ಲೈಂಗಿಕ ಕಿರುಕುಳ ನೀಡುತ್ತಿದ್ದರು, ಆದರೆ ಸಂತ್ರಸ್ತರು ದೂರು ನೀಡಲು ಹಿಂಜರಿಯುತ್ತಿದ್ದರು ಎಂದು ಹೇಳಲಾಗಿದೆ.ಈ ಹಿಂದೆ ಮಂಗಳೂರು ನಗರ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರಿಂದ ನ್ಯಾಯಯುತ ತನಿಖೆ ನಡೆಯುವ ಬಗ್ಗೆ ಸಂಶಯವಿದೆ ಎಂದು ದೂರುದಾರರು ತಿಳಿಸಿದ್ದಾರೆ. ಆದ್ದರಿಂದ ಈ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ಅಥವಾ ಸಿಐಡಿ ತನಿಖೆಗೆ ಒಪ್ಪಿಸಬೇಕು ಮತ್ತು ಅಧಿಕಾರಿಯನ್ನು ಕರ್ತವ್ಯದಿಂದ ದೂರವಿರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇನ್ಸ್‌ಪೆಕ್ಟರ್ ವಿರುದ್ಧದ ದೂರುಗಳ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆ ಆರಂಭವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಪಿ ಮಿಥುನ್ ಅವರು, “ಉತ್ತರ ವಿಭಾಗದ ಎಸಿಪಿ ನೇತೃತ್ವದಲ್ಲಿ ತನಿಖೆ ಆರಂಭವಾಗಿದ್ದು, ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ. ಮತ್ತೊಂದೆಡೆ, ರಾಜ್ಯ ಮಹಿಳಾ ಆಯೋಗವು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ಪತ್ರ ಬರೆದಿದೆ. ಮಹಿಳೆಯರ ರಕ್ಷಣೆ ಮಾಡಬೇಕಾದ ಸರ್ಕಾರಿ ಅಧಿಕಾರಿಯೇ ಇಂತಹ ಕೃತ್ಯ ಎಸಗಿರುವುದು ಗಂಭೀರ ವಿಚಾರ ಎಂದು ಆಯೋಗ ಹೇಳಿದೆ.

ನಿಯಮಾನುಸಾರ ಪ್ರಕರಣವನ್ನು ಪರಿಶೀಲಿಸಿ ಶಿಸ್ತು ಕ್ರಮ ಕೈಗೊಳ್ಳುವಂತೆ ಮತ್ತು ಈ ಬಗ್ಗೆ ವರದಿ ಸಲ್ಲಿಸುವಂತೆ ಆಯೋಗ ನಿರ್ದೇಶಿಸಿದೆ.

Exit mobile version