ಮಂಗಳೂರು, ಮಾ,16: ಮಂಗಳೂರು ತಾಲ್ಲೂಕಿನ ಮಿನಿ ವಿಧಾನಸೌಧದ ಮೊದಲ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೊಂದಾವಣೆ ಕಚೇರಿಯಲ್ಲಿ ಕಳೆದ ಹದಿನೈದು ದಿನಗಳಿಂದ ಗಂಭೀರ ಸಮಸ್ಯೆ ಉಂಟಾಗಿದೆ.
ಹಿರಿಯ ಉಪ ನೊಂದಣಾಧಿಕಾರಿ ಶಶಿಧರ್ ಅವರು ರಜೆ ಮೇಲೆ ಇರುವುದರಿಂದ ಕಚೇರಿಯ ಕೆಲಸಗಳು ವಿಳಂಬವಾಗುತ್ತಿವೆ. ಇದರಿಂದ ಸಾರ್ವಜನಿಕರು, ವಿಶೇಷವಾಗಿ ವೃದ್ಧರು ಹಾಗೂ ಮಹಿಳೆಯರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ಸಾಮಾನ್ಯವಾಗಿ ಈ ಕಚೇರಿಯಲ್ಲಿ ಇಬ್ಬರು ಉಪ ನೊಂದಣಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಾರೆ.
ಆದರೆ ಈಗ ಕವಿತಾ ಎಂಬ ಅಧಿಕಾರಿಯೊಬ್ಬರೇ ಕೆಲಸ ನಿರ್ವಹಿಸುತ್ತಿದ್ದು, ಎಲ್ಲಾ ಜವಾಬ್ದಾರಿಗಳು ಒಬ್ಬರ ಮೇಲೇ ಬಿದ್ದಿವೆ. ಪ್ರತಿದಿನ ನೂರಾರು ಜನರು ದಸ್ತಾವೇಜುಗಳ ನೋಂದಣಿಗಾಗಿ ಕಚೇರಿಗೆ ಬರುತ್ತಿದ್ದಾರೆ. ಆದರೆ ಸಿಬ್ಬಂದಿ ಕೊರತೆಯಿಂದ ದಿನಕ್ಕೆ ನೂರು ಕೆಲಸ ಆಗಬೇಕಾದಲ್ಲಿ ಈಗ ಇಪ್ಪತ್ತು ನೋಂದಣಿಯೂ ಸರಿಯಾಗಿ ಆಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಇದರ ಪರಿಣಾಮವಾಗಿ ಜನರು ದಿನಗಟ್ಟಲೆ ಕಚೇರಿಗೆ ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಈ ಸಮಸ್ಯೆಯಿಂದ ಮಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ವಿಶೇಷವಾಗಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರ ಕ್ಷೇತ್ರದ ಜನರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಹೀಗಾಗಿ ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರಾದ ಮುಲ್ಲೈ ಮುಹಿಲನ್ ಅವರು ತಕ್ಷಣ ಕ್ರಮ ಕೈಗೊಂಡು ಕಚೇರಿಗೆ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಾರ್ವಜನಿಕರಿಗೆ ಸೇವೆ ನೀಡುವ ಸರ್ಕಾರಿ ಕಚೇರಿಗಳಲ್ಲಿ ಇಂತಹ ಸಮಸ್ಯೆಗಳು ಉಂಟಾಗದAತೆ ಸರ್ಕಾರ ತ್ವರಿತ ಕ್ರಮ ಕೈಗೊಳ್ಳುವುದು ಅತ್ಯವಶ್ಯಕವಾಗಿದೆ.