Site icon Ullalavani

ಕೊಣಾಜೆ ಮಂಗಳೂರು ವಿ.ವಿ.ಯಲ್ಲಿ ಅಂಬೇಡ್ಕರ್ ಭವನ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಎಲ್ಲಾ ರೀತಿಯ ಶಿಫಾರಸ್ಸು ಮಾಡುವುದಾಗಿ ರಾಜ್ಯ ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.

ಅವರು ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಬುಧವಾರ ಕುವೆಂಪು ವಿಶ್ವವಿದ್ಯಾನಿಲಯಕ್ಕೆ ನೂತನವಾಗಿ ಆಯ್ಕೆಯಾದ ಪ್ರೊ.ಜೋಗನ್ ಶಂಕರ್ ಇವರಿಗೆ ಅಭಿನಂದನೆ ನೆರವೇರಿಸಿ ಮಾತನಾಡಿದರು.

ಸಾಮಾಜಿಕ ನ್ಯಾಯದ ಚಿಂತನೆ ನಡೆಸಿ ಮಾನವತಾವಾದಿಯನ್ನು ಬೋಧಿಸಿದ ಡಾ.ಅಂಬೇಡ್ಕರ್ ಅವರ ಹೆಸರಿನ ಅಂಬೇಡ್ಕರ್ ಭವನದ ನಿರ್ಮಾಣಕ್ಕೆ ಎಲ್ಲಾ ರೀತಿಯ ಅನುದಾನವನ್ನು ಒದಗಿಸಿಕೊಡಲು ಸರಕಾರದೊಂದಿಗೆ ಮಾತುಕತೆ ನಡೆಸಿ ಶೀಘ್ರವೇ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುವುದಾಗಿ ಹೇಳಿದ ಅವರು ದೇಶ ನೈಸರ್ಗಿಕ ಸಂಪನ್ಮೂಲ, ಮಾನವೀಯ ಸಂಪನ್ಮೂಲ ಮತ್ತು ಜನಸಂಖ್ಯೆಯಲ್ಲಿ ಶ್ರೀಮಂತವಾಗಿದ್ದರೂ, ಅಸಮಾನತೆ, ಅಸ್ಪøಶ್ಯತೆ ಹಾಗೂ ಅನಕ್ಷರತೆಯಿಂದ ಅಭಿವೃದ್ಧಿಯಾಗಿಲ್ಲ. ಬಡತನವನ್ನಾದರೂ ಸಹಿಬಹುದು ಆದರೆ ಜಾತೀಯತೆಯನ್ನು ಸಹಿಸಲು ಅಸಾಧ್ಯ. ಅಸಮಾನತೆ, ಕ್ರೌರ್ಯದ ದೇವದಾಸಿ ಪದ್ಧತಿಗಳ ಬಗ್ಗೆ ಅಧ್ಯಯನ ನಡೆಸಿ ಅದರಲ್ಲಿ ಶೋಷಣೆಗೊಳಗಾದವರನ್ನು ಪುನರ್ವಸತಿ ಕಲ್ಪಿಸಿ ಸಮಾಜದ ಮುಖ್ಯವಾಹಿನಿಗೆ ಕರೆತರುವಂತಹ ಪ್ರಯತ್ನವನ್ನು ಕೈಗೊಂಡಿರುವ ಪ್ರೊ.ಜೋಗನ್ ಶಂಕರ್ ಇವರ ಕಾರ್ಯವೈಖರಿ ಶ್ಲಾಘನೀಯ. ಸಮಾಜದಲ್ಲಿ ಹಿಂದುಳಿದವರ ಕೇವಲ ಮೀಸಲಾತಿಗೆ ಶ್ರಮ ಪಡೆಯದೆ , ಅವರಲ್ಲಿ ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸುವ ಮೂಲಕ ಕಲ್ಯಾಣ ರಾಜ್ಯ ನಿರ್ಮಿಸಲು ಸಾಧ್ಯ ಎಂದರು.

ಶೀಘ್ರದಲ್ಲಿ ಮೂಢನಂಬಿಕೆ ವಿರೋಧಿ ಮಸೂದೆ: ಧರ್ಮದ ಹೆಸರಿನಲ್ಲಿ ವೈಭವೀಕರಣ, ತಾರತಮ್ಯಗಳೆಲ್ಲಾ ಅವೈಜ್ಞಾನಿಕವಾಗಿ ನಡೆಯುತ್ತಿದೆ. ಇದರಿಂದ ಜನ ಶೋಷಣೆಗೊಳಗಾಗುತ್ತಿದ್ದಾರೆ. ಆದರೆ ಸಮಾಜದಲ್ಲಿ ನಾಸ್ತಿಕ, ಆಸ್ತಿಕರು ಮುಖ್ಯವಲ್ಲ. ಮೊದಲು ಮಾನವತಾವಾದಿಯಾಗಿ ಬಾಳಿದರೆ ಏಳಿಗೆ ಸಾಧ್ಯ. ಈ ನಿಟ್ಟಿನಲ್ಲಿ ಸಾಹಿತಿಗಳು, ಬುದ್ಧಿಜೀವಿಗಳು, ಪ್ರಗತಿಪರ ಚಿಂತಕರು ಹೀಗೆ ಎಲ್ಲರ ವಿಚಾರಗಳನ್ನು ಕ್ರೋಢೀಕರಿಸಿ ಸರಕಾರ ಶೀಘ್ರವೇ ಮೂಢನಂಬಿಕೆ ವಿರೋಧಿ ಮಸೂದೆಯನ್ನು ಜಾರಿಗೊಳಿಸಲಿದೆ ಎಂದರು.

ಮಂಗಳೂರು ವಿ.ವಿ.ಯ ಉಪಕುಲಪತಿ .ಪ್ರೊ.ಕೆ.ಬೈರಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಕಾಳೇಗೌಡ ನಾಗಾವರ ಅಭಿನಂದನಾ ಭಾಷಣ ಮಾಡಿದರು. ಪ್ರೊ. ಅರಬಿ.ಯು, ಪ್ರೊ.ವಿಶ್ವನಾಥ ಮತ್ತು ಗೋವಿಂದ ಮಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿ ಪ್ರೊ.ಪಿ.ಎ.ರೇಗೋ ಸ್ವಾಗತಿಸಿದರು. ಪರೀಕ್ಷಾಂಗ ಕುಲಸಚಿವ ಪ್ರೊ.ಬಿ.ನಾರಾಯಣ ವಂದಿಸಿದರು.

Exit mobile version