ಮುಲ್ಕಿ: ಮುಲ್ಕಿ ಸುಂದರ ರಾಮ ಶೆಟ್ಟಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಸಹಾಯ ಹಸ್ತ ಪ್ರದಾನ ಸಮಾರಂಭ ಮುಲ್ಕಿ ಸುಂದರ ರಾಮ ಶೆಟ್ಟಿ ಸಭಾಭವನದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಮುಲ್ಕಿ ಸುಂದರ ರಾಮ ಶೆಟ್ಟಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷ ಡಾ.ಕೆ.ಪ್ರಕಾಶ್ ಶೆಟ್ಟಿ ಅವರು, “ನಮ್ಮ ಸಮಾಜದ ಓರ್ವ ಕಣ್ಮಣಿ, ಮುಲ್ಕಿ ಕಂಡಂತಹ ಧೀಮಂತ ವ್ಯಕ್ತಿ ಮುಲ್ಕಿ ಸುಂದರ ರಾಮ ಶೆಟ್ಟಿ ಅವರ ಹೆಸರಿನಲ್ಲಿ ಟ್ರಸ್ಟ್ ಅಧ್ಯಕ್ಷನಾಗಿ ಇಂತಹ ಕಾರ್ಯಕ್ರಮ ಆಯೋಜಿಸುತ್ತಿರುವುದು ನನ್ನ ಸೌಭಾಗ್ಯ. ಸುಂದರ ರಾಮ ಶೆಟ್ಟಿಯವರ ಸ್ಮರಣಾರ್ಥ ಭವನವನ್ನು ನಿರ್ಮಿಸಲು ನನ್ನನ್ನು ಸಂಚಾಲಕನನ್ನಾಗಿ ಆಯ್ಕೆ ಮಾಡಿದ್ರು ಆಗ ಅದನ್ನು ಅತ್ಯಂತ ಪ್ರೀತಿಯಿಂದ ಕೈಗೆತ್ತಿಕೊಂಡವನು ನಾನು. ನಂತರ ನಾಲ್ಕು ವರ್ಷಗಳ ಹಿಂದೆ ಮುಲ್ಕಿಯಲ್ಲಿ 34 ಕೋಟಿ ರೂ. ವೆಚ್ಚದಲ್ಲಿ ಭವ್ಯವಾದ ಭವನವನ್ನು ನಿರ್ಮಾಣ ಮಾಡಲಾಯಿತು. ಸುಂದರ ರಾಮ ಶೆಟ್ಟಿಯವರಿಂದ ಇಂದಿಗೂ ಸಮಾಜದ ಅದೆಷ್ಟೋ ಮನೆಗಳಲ್ಲಿ ದೀಪ ಬೆಳಗುತ್ತಿದೆ. ಅವರಿಂದ ಎಷ್ಟೋ ಕುಟುಂಬಗಳಿಗೆ ನೆಮ್ಮದಿ ಸಿಕ್ಕಿದೆ. ಇಲ್ಲಿ ಸಹಾಯಹಸ್ತ ಸ್ವೀಕರಿಸಿದವರು ಮುಂದೆ ತಾವೂ ಕೂಡ ಸುಂದರ ರಾಮ ಶೆಟ್ಟಿಯವರಂತಾಗಬೇಕು. ನಾವು ಮಾಡುವ ಸಂಪಾದನೆ ಸಮಾಜಕ್ಕೆ ದಾರಿದೀಪವಾಗಬೇಕು“ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತಾಡಿದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು, “ಜೀವನದಲ್ಲಿ ಸಹಾಯಹಸ್ತ ಎನ್ನುವುದು ಎಲ್ಲರಿಗೂ ಅವಶ್ಯಕವಾಗಿರುತ್ತದೆ. ಜೀವನದಲ್ಲಿ ಸೋತಾಗ ನೊಂದಾಗ ಯಾರಾದರೂ ನಮಗೆ ನೆರವು ನೀಡಬೇಕು ಎನ್ನುವ ಆಶಯವಿರುತ್ತದೆ. ಆಗ ನಮ್ಮನ್ನು ಕೈಹಿಡಿದು ಮೇಲಕ್ಕೆ ಎತ್ತಿದವರನ್ನು ನಾವು ಯಾವತ್ತೂ ಮರೆಯಬಾರದು. ಇಲ್ಲಿ ಆರ್ಥಿಕ ನೆರವು ಪಡೆದವರು ಮುಂದೆ ಜೀವನದಲ್ಲಿ ಇನ್ನಷ್ಟು ಮಂದಿಗೆ ಸಹಾಯಹಸ್ತ ಚಾಚುವಂತಾಗಬೇಕು” ಎಂದರು.
ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಎ ಉಮಾನಾಥ್ ಕೋಟ್ಯಾನ್ ಮಾತಾಡಿ, “ಪ್ರಕಾಶ್ ಶೆಟ್ಟಿ ಅವರು ಶ್ರೀಮಂತರೆನ್ನುವುದಕ್ಕಿಂತ ಜಾಸ್ತಿ ಹೃದಯ ಶ್ರೀಮಂತಿಕೆ ಉಳ್ಳವರು. ಸದಾಕಾಲ ತಮ್ಮ ಊರಿನ ಜನರ ಸಂಕಷ್ಟಕ್ಕೆ ಮಿಡಿಯುವ ಅವರಿಗೆ ದೇವರು ಆಯುಷ್ಯ, ಅರೋಗ್ಯ ಕೊಟ್ಟು ಕಾಪಾಡಬೇಕು“ ಎಂದರು.
ದೈಜಿ ವರ್ಲ್ಡ್ ಸ್ಥಾಪಕ ವಾಲ್ಟರ್ ನಂದಳಿಕೆ ಮಾತಾಡಿ, “ಮುಲ್ಕಿ ಸುಂದರ ರಾಮ ಶೆಟ್ಟಿಯವರಂತೆಯೇ ಬದುಕುತ್ತಿರುವ ಪ್ರಕಾಶ್ ಶೆಟ್ಟಿ ಅವರದ್ದು ಅಪರೂಪದ ವ್ಯಕ್ತಿತ್ವ. ಇಂದಿಲ್ಲಿ ಸಹಾಯಹಸ್ತ ಪಡೆದ ವಿದ್ಯಾರ್ಥಿಗಳು ಮುಂದೆ ಜೀವನದಲ್ಲಿ ಸಾಧನೆಯನ್ನು ಮಾಡಿ ಸಮಾಜದ ಇನ್ನಷ್ಟು ಜನರಿಗೆ ನೆರವಾಗಬೇಕು” ಎಂದರು.
ವೇದಿಕೆಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮೂಲ್ಕಿ ಸುಂದರ ರಾಮ ಶೆಟ್ಟಿ ಅವರ ಸುಪುತ್ರ ಹರಿಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಮುಲ್ಕಿ ಸುಂದರ ರಾಮ ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ಇದರ ಟ್ರಸ್ಟಿ ಬಾಲಕೃಷ್ಣ ಹೆಗ್ಡೆ ಪ್ರಾಸ್ತಾವಿಕ ಮಾತನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ದೇವರನ್ನು ಸ್ತುತಿಸಿದರು. ನಿತೇಶ್ ಶೆಟ್ಟಿ ಎಕ್ಕಾರ್ ಹಾಗೂ ನಿತಿನ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ಶೆಟ್ಟಿ ಗುರ್ಮೆ ವಂದಿಸಿದರು.
ಈ ಬಾರಿ ಮುಲ್ಕಿ ಸುಂದರರಾಮ ಶೆಟ್ಟಿ ಸ್ಮಾರಕ ಚಾರಿಟೇಬಲ್ ಟ್ರಸ್ಟ್ ವತಿಯಿಂದ 300 ಕುಟುಂಬಗಳಿಗೆ ಹಾಗೂ ವಿದ್ಯಾಸಂಸ್ಥೆಗಳಿಗೆ ಒಟ್ಟು 50 ಲಕ್ಷ ರೂಪಾಯಿಗಳ ಸಹಾಯ ಧನವನ್ನು ವಿತರಿಸಲಾಯಿತು.