ಉಳ್ಳಾಲ; ಇಲ್ಲಿನ ಠಾಣಾ ವ್ಯಾಪ್ತಿಯ ಕೋಟೆಕಾರ್ ಗ್ರಾಮದ ಬಗಂಬಿಲ ಸಮೀಪದ ಗ್ರೌಂಡ್ ಪ್ರದೇಶದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಉಪ್ಪಳದ ಶೇಕ್ ಅರ್ಬಾಜ್ ಮತ್ತು ರಶೀದ್ ಆಲ್ವಿನ್ ಎಂದು ಗುರುತಿಸಲಾಗಿದೆ. ಇವರು ಮಾದಕ ವಸ್ತು ಗಾಂಜಾವನ್ನು ತಂದು ತನ್ನ ಗಿರಾಕಿಗಳಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಬಂಧಿತ ಆರೋಪಿಗಳಿಂದ 51,500 ರೂ.ಮೌಲ್ಯದ 1.110 ಕೆಜಿ ಗಾಂಜಾ, 520 ರೂ.ನಗದು, ಮೊಬೈಲ್ ಹಾಗೂ ಇತರೆ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
