Site icon Ullalavani

ಗೃಹ ಬಳಕೆ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯವಿಲ್ಲ: ದ.ಕ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.

ಮಂಗಳೂರು, ಮಾ. 14 ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೃಹಬಳಕೆಯ ಅಡುಗೆ ಅನಿಲ (ಎಲ್‌ಪಿಜಿ) ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಮುಂಬರುವ ದಿನಗಳಲ್ಲಿಯೂ ಯಾವುದೇ ಕೊರತೆಯಾಗುವ ಸಾಧ್ಯತೆಯಿಲ್ಲ ಎಂದು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಪ್ರಸ್ತುತ ನಿಯಮದಂತೆ ಪ್ರತಿ 25 ದಿನಗಳಿಗೊಮ್ಮೆ ಒಂದು ಸಿಲಿಂಡರ್‌ನಂತೆ ಗೃಹಬಳಕೆಯ ಎಲ್‌ಪಿಜಿ ಪೂರೈಕೆ ಮಾಡಲಾಗುತ್ತಿದೆ. ಸಾರ್ವಜನಿಕರು ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಅಥವಾ ಏಕಕಾಲಕ್ಕೆ ಹೆಚ್ಚಿನ ಸಿಲಿಂಡರ್ ಕಾಯ್ದಿರಿಸಲು ಪ್ರಯತ್ನಿಸಬೇಡಿ. ಪ್ರಸ್ತುತ ವ್ಯವಸ್ಥೆಯಲ್ಲಿ ಅಂತಹ ಬುಕಿಂಗ್‌ಗಳಿಗೆ ಅವಕಾಶವಿಲ್ಲ” ಎಂದು ತಿಳಿಸಿದರು.


ಎಲ್‌ಪಿಜಿ ಏಜೆನ್ಸಿಗಳು ಅಕ್ರಮವಾಗಿ ಸಿಲಿಂಡರ್ ದಾಸ್ತಾನು ಮಾಡುವುದನ್ನು ತಡೆಯಲು ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿದೆ. ಮಂಗಳೂರು ಪೊಲೀಸ್ ಕಮಿಷನರೇಟ್ ಮತ್ತು ಜಿಲ್ಲಾ ಪೊಲೀಸ್ ವ್ಯಾಪ್ತಿಯ ಅಧಿಕಾರಿಗಳು ಈಗಾಗಲೇ ಹಲವು ಗೋದಾಮುಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದ್ದಾರೆ.ಐಒಸಿಎಲ್ (IOCL), ಬಿಪಿಸಿಎಲ್ (BPCL) ಮತ್ತು ಹೆಚ್‌ಪಿಸಿಎಲ್ (HPCL) ನಂತಹ ಪ್ರಮುಖ ತೈಲ ಕಂಪನಿಗಳ ಜನರಲ್ ಮ್ಯಾನೇಜರ್‌ಗಳೊಂದಿಗೆ ಸಭೆ ನಡೆಸಲಾಗಿದ್ದು, ಸುಗಮ ಪೂರೈಕೆಗೆ ಸೂಚಿಸಲಾಗಿದೆ. ಹೈದರಾಬಾದ್ ಮತ್ತು ತಮಿಳುನಾಡಿನಂತಹ ರಾಜ್ಯಗಳಿಗೆ ಸಾಗಣೆಯಾಗುವ ಎಲ್‌ಪಿಜಿಗೆ ಯಾವುದೇ ಅಡ್ಡಿಯಾಗದಂತೆ ಕ್ರಮ ವಹಿಸಲಾಗಿದೆ.ಉತ್ಪಾದನೆ ಮತ್ತು ಆಮದು ಸುಗಮ:
ಎಂಆರ್‌ಪಿಎಲ್ (MRPL) ನಲ್ಲಿ ಎಲ್‌ಪಿಜಿ ಉತ್ಪಾದನೆ ಎಂದಿನಂತೆ ಮುಂದುವರಿದಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಖಚಿತಪಡಿಸಿದ್ದಾರೆ. ಅಲ್ಲದೆ, ಐಒಸಿಎಲ್ ಸಂಸ್ಥೆಗೆ ಅಗತ್ಯವಿರುವ ಎಲ್‌ಪಿಜಿ ಆಮದು ಪ್ರಕ್ರಿಯೆಯೂ ಸುಗಮವಾಗಿ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.”ವಾಣಿಜ್ಯ ಬಳಕೆಯ ಎಲ್‌ಪಿಜಿ ಪೂರೈಕೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾರ್ಗಸೂಚಿ ಬರುವವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಸಮಸ್ಯೆಯೂ ಶೀಘ್ರದಲ್ಲೇ ಬಗೆಹರಿಯಲಿದ್ದು, ಆತಂಕ ಪಡುವ ಅಗತ್ಯವಿಲ್ಲ” ಎಂದು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಭರವಸೆ ನೀಡಿದರು.


ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಹಾಸ್ಟೆಲ್‌ಗಳು, ವಸತಿ ಶಾಲೆಗಳು, ಮಿಲಿಟರಿ ಕ್ಯಾಂಟೀನ್‌ಗಳು, ಸಿಐಎಸ್‌ಎಫ್ ಘಟಕಗಳು ಮತ್ತು ಕಾರಾಗೃಹಗಳಿಗೆ ಎಲ್‌ಪಿಜಿ ಪೂರೈಕೆ ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯಲಿದೆ. ದೇವಸ್ಥಾನ, ಚರ್ಚ್ ಮತ್ತು ಮಸೀದಿಗಳ ಸಮುದಾಯ ಅಡುಗೆ ಮನೆಗಳಿಗೂ ನಿರಂತರ ಪೂರೈಕೆ ನೀಡುವಂತೆ ಏಜೆನ್ಸಿಗಳಿಗೆ ಸೂಚಿಸಲಾಗಿದೆ. ಜೊತೆಗೆ ರೈಲ್ವೆ ನಿಲ್ದಾಣದ ಅಧಿಕಾರಿಗಳ ಮನವಿಗೂ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.

Exit mobile version