ಉಳ್ಳಾಲ: ಮಾದರಿ ಗ್ರಾಮ ಅಭಿಯಾನ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಉಳ್ಳಾಲ ತಾಲೂಕು ಹಾಗೂ ರಾಷ್ಟ್ರೀಯ ನಿರ್ಮಲ ಗ್ರಾಮ ಪುರಸ್ಕೃತ ಜನಶಿಕ್ಷಣ ಟ್ರಸ್ಟ್ ಆಶ್ರಯದಲ್ಲಿ ಸಮುದಾಯ ಆರೋಗ್ಯ ಅರಿವು ಅಭಿಯಾನ, ಕಸ ಮುಕ್ತ ಗ್ರಾಮ-ಕ್ಯಾನ್ಸರ್ ಮುಕ್ತ ಗ್ರಾಮ, ಸ್ವಚ್ಛ ಮನೆ ಸ್ವಯಂ ಘೋಷಣೆ ಹಾಗೂ ಸಂವಾದ ಸಂಕಲ್ಪ ಕಾರ್ಯಕ್ರಮ ಉಳ್ಳಾಲ ಪ್ರೆಸ್ ಕ್ಲಬ್‌ನಲ್ಲಿ ನಡೆಯಿತು.
ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಒಂದು ಲಕ್ಷ ರೂ.ವರೆಗೆ ದಂಡ ವಿಧಿಸುವ ಕಾನೂನು ಇದ್ದರೂ, ಅದರ ಸಮರ್ಪಕ ಜಾರಿಯ ಕೊರತೆಯಿಂದ ಸಂಪೂರ್ಣ ಸ್ವಚ್ಛತೆ ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂದರು.
ಮುಡಿಪು ಬೆಟ್ಟದಲ್ಲಿ ಮುಂದಿನ ತಿಂಗಳು ಉತ್ಸವ ನಡೆಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಈ ಉತ್ಸವ ಪ್ಲಾಸ್ಟಿಕ್ ಮುಕ್ತ ಹಾಗೂ ಸಂಪೂರ್ಣ ಸ್ವಚ್ಛತೆ ಸಾಧಿಸುವ ನಿಟ್ಟಿನಲ್ಲಿ ನಡೆಯಲಿದ್ದು ಇಂದು ನಡೆಯುವ ಸಂವಾದ ಪೂರಕವಾಗಬೇಕಿದೆ ಎಂದು ಹೇಳಿದರು.
ಪರಿಸರ ಪ್ರೇಮಿ ಮಾಧವ ಉಳ್ಳಾಲ್ ಮಾತನಾಡಿ, ಪರಿಸರ ಸಂರಕ್ಷಣೆಗೆ ಕೇವಲ ಗಿಡ ನೆಡುವುದಷ್ಟೇ ಸಾಕಾಗುವುದಿಲ್ಲ; ನೆಟ್ಟ ಗಿಡವನ್ನು ಕನಿಷ್ಠ ಮೂರುವರೆ ವರ್ಷಗಳವರೆಗೆ ಪೋಷಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದರು. ಮಂಗಳೂರನ್ನು ಹಣ್ಣುಗಳ ನಗರವನ್ನಾಗಿ ರೂಪಿಸುವ ಉದ್ದೇಶದಿಂದ ಬೃಹತ್ ಯೋಜನೆಯನ್ನು ಕೈಗೊಳ್ಳಲಾಗಿದೆ. ಜೈಪುರವು ತನ್ನ ವಿಶೇಷತೆಯಿಂದ ಗುರುತಿಸಿಕೊಂಡಿರುವAತೆ, ಮಂಗಳೂರೂ ಮುಂದಿನ ದಿನಗಳಲ್ಲಿ ಹಣ್ಣುಗಳ ನಗರ” ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಗುರಿ ಹೊಂದಿದೆ ಎಂದು ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಪುಷ್ಪರಾಜ್ ಬಿ.ಎನ್. ಅಧ್ಯಕ್ಷತೆ ವಹಿಸಿದ್ದರು. ಪರಿಸರ ಪ್ರೇಮಿ ಮಾಧವ ಉಳ್ಳಾಲ್, ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶಶಿಧರ್ ಪೊಯ್ಯತ್ತಬೈಲ್, ರಾಜ್ಯ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ನಿಟ್ಟೆ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಮೌಲ್ಯ ಡಿ. ಮೊದಲಾದವರು ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್ ನಾಯಕ್ ಸ್ವಾಗತಿಸಿದರು. ಉಪಾಧ್ಯಕ್ಷ ಸತೀಶ್ ಪುಂಡಿಕ್ಕೆ ನಿರೂಪಿಸಿದರು.