Site icon Ullalavani

ತೊಕ್ಕೊಟ್ಟಿನಲ್ಲಿ ಅನ್ವಿತ್ ಎಲೆಕ್ಟ್ರಾನಿಕ್ಸ್ ನವೀಕೃತ ಮಳಿಗೆ ಉದ್ಘಾಟನೆ


ತೊಕ್ಕೊಟ್ಟು: ಒಳಪೇಟೆಯ ಸುವರ್ಣ ಸಂಕೀರ್ಣದಲ್ಲಿರುವ ಅನ್ವಿತ್ ಎಲೆಕ್ಟ್ರಾನಿಕ್ಸ್ ತನ್ನ ಹಳೆಯ ಮಳಿಗೆಯನ್ನು ನವೀಕೃತ ವಿನ್ಯಾಸದೊಂದಿಗೆ ಗೃಹೋಪಯೋಗಿ ವಸ್ತುಗಳು, ಫರ್ನಿಚರ್ ಹಾಗೂ ಅಡಿಗೆಮನೆ ಉಪಕರಣಗಳೊಂದಿಗೆ ಪುನಃ ಶುಭಾರಂಭಗೊಳಿಸಲಾಯಿತು.


ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ದೀಪಪ್ರಜ್ವಲನೆ ಮೂಲಕ ಉದ್ಘಾಟಿಸಿದರು. ಉಡುಪಿ–ಚಿಕ್ಕಮಗಳೂರು ಸಂಸದ ಹಾಗೂ ಕರ್ನಾಟಕ ಸರ್ಕಾರದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅನ್ವಿತ್ ಎಲೆಕ್ಟ್ರಾನಿಕ್ಸ್ ವಿಭಾಗವನ್ನು ಉದ್ಘಾಟಿಸಿದರು. ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಅನ್ವಿತ್ ಫರ್ನಿಚರ್ ವಿಭಾಗವನ್ನು ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ಸಮಾಜಕ್ಕೆ ಸಮರ್ಪಣೆಯ ಮನೋಭಾವದಿಂದ ಉದ್ಯಮ ನಡೆಸಬೇಕು ಎಂದು ಹೇಳಿದರು. ಸುಮಾರು ಆರು ಅರೆ ಕೋಟಿ ಜನಸಂಖ್ಯೆ ಇರುವ ನಮ್ಮ ರಾಜ್ಯದಲ್ಲಿ ಕೇವಲ ಎರಡು ಶೇಕಡಾ ಮಂದಿ ಮಾತ್ರ ಉದ್ಯೋಗದಲ್ಲಿದ್ದು, ಉಳಿದ ತೊಂಬತ್ತೆಂಟು ಶೇಕಡಾ ಜನರು ಸ್ವಂತ ಉದ್ಯಮ ಆರಂಭಿಸಿ ಇತರರಿಗೆ ಉದ್ಯೋಗ ನೀಡುವ ಕೆಲಸ ಮಾಡುತ್ತಿದ್ದಾರೆ. ಇಂತಹ ಉದ್ಯಮಗಳು ಸಮಾಜದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತವೆ ಎಂದು ಅವರು ಹೇಳಿದರು.


ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್, ತಂದೆ–ತಾಯಿ, ಗುರುಗಳು ಹಾಗೂ ಹಿರಿಯರ ಆಶೀರ್ವಾದದೊಂದಿಗೆ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಪ್ರೀತಿ ಹಾಗೂ ವಿಶ್ವಾಸದಿಂದ ಕೆಲಸ ಮಾಡಿದಾಗ ಸಮಾಜಕ್ಕೆ ಮಾದರಿಯಾದ ಪ್ರೇರಣೆ ದೊರೆಯುತ್ತದೆ ಎಂದು ಹೇಳಿದರು. ಇಂತಹ ಸಂಸ್ಥೆಗಳ ಮೂಲಕ ಅನೇಕ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿದ್ದು, ಊರಿನ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ ಎಂದರು.
ಉಳ್ಳಾಲದ ಅಭಿವೃದ್ಧಿ ಜನರಿಗೆ ಸಂತೋಷ ತಂದಿದ್ದು, ತೊಕ್ಕೊಟ್ಟಿನಲ್ಲಿ ಜನರ ಕೈಯಲ್ಲಿ ಹಣವಿರುವುದು ಅಭಿವೃದ್ಧಿಯ ಸೂಚನೆ ಎಂದು ಅವರು ಅಭಿಪ್ರಾಯಪಟ್ಟರು. ಕೊಟ್ಟೆಪುರದಿಂದ ಬೊಳಾರ್ ಕಡೆಗೆ ಸೇತುವೆ ನಿರ್ಮಾಣವಾದ ಬಳಿಕ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಿದೆ. ತೊಕ್ಕೊಟ್ಟಿನಲ್ಲಿ ಅಂಡರ್‌ಪಾಸ್ ಹಾಗೂ ದ್ವಿಪಥ ಮೇಲ್ಸೇತುವೆ ಕಾಮಗಾರಿಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿವೆ ಎಂದು ತಿಳಿಸಿದರು.


ಇದೇ ಸಂಸ್ಥೆಯ ಮೂರನೇ ಶಾಖೆಯೂ ಅತಿ ಶೀಘ್ರದಲ್ಲಿ ಆರಂಭವಾಗಲಿ ಎಂದು ಅವರು ಹಾರೈಸಿದರು.
ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ವಿಜಯ್ ಕ್ರಾಂತಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.


ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸೂರ್ಯನಾರಾಯಣ ಹೊಳ್ಳ, ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರ ಉಳಿಯದ ದೇವು ಮೂಲ್ಯಣ್ಣ, ಶ್ರೀ ಚೀರುಂಭ ಭಗವತೀ ಕ್ಷೇತ್ರದ ಪ್ರಧಾನ ಅರ್ಚಕ ಮಂಜಪ್ಪ ಕಾರ್ಣವರ್, ಪೆರ್ಮನ್ನೂರಿನ ಸಂತ ಸೆಬೆಸ್ಟಿಯನ್ ದೇವಾಲಯದ ಧರ್ಮಗುರು ವಿ.ರೆವ್. ಫಾದರ್ ಸಿಪ್ರಿಯನ್ ಪಿಂಟೋ, ಉಳ್ಳಾಲದ ಸಯ್ಯಿದ್ ಮದನಿ ದರ್ಗಾದ ಅಧ್ಯಕ್ಷ ಬಿ.ಜೆ. ಹನೀಫ್ ಹಾಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಮಳಿಗೆಯ ನಿರ್ವಹಣಾ ಪಾಲುದಾರ ಅನಿಲ್ ಡಿಸೋಜಾ, ಲಕ್ಷ್ಮಣ ವೈ, ಕೆ.ಟಿ. ಸುವರ್ಣ, ನಿರಂಜನ್ ದಾಸ್, ಸುರೇಶ್ ಭಟ್ಟನಗರ, ಚಿದಾನಂದ ಗುರಿಕಾರ ನಂದ್ಯ, ಸತೀಶ್ ನಾಯಕ್, ಹೈದರ್ ಪರ್ತಿಪಾಡಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಸುಮಾರು ಇಪ್ಪತ್ತು ವರ್ಷಗಳಿಂದ ತೊಕ್ಕೊಟ್ಟಿನಲ್ಲಿ ವಿಶ್ವಾಸಾರ್ಹ ಹೆಸರಾಗಿರುವ ಅನ್ವಿತ್ ಎಲೆಕ್ಟ್ರಾನಿಕ್ಸ್ ಇದೀಗ ನವೀಕೃತ ಮಳಿಗೆಯ ಮೂಲಕ ವಿವಿಧ ಗೃಹೋಪಯೋಗಿ ವಸ್ತುಗಳನ್ನು ಗ್ರಾಹಕರಿಗೆ ಒದಗಿಸಲಿದೆ.

Exit mobile version