ಉಳ್ಳಾಲ: ಸಮನ್ವಯ ಎಂಬುದು ಯಶಸ್ಸಿನ ಪ್ರಮುಖ ಆಧಾರವಾಗಿದ್ದು, ಒಬ್ಬ ವ್ಯಕ್ತಿಯ ದೃಷ್ಟಿಕೋನ ಮತ್ತು ಕನಸು ಸಮಾಜದಲ್ಲಿ ದೊಡ್ಡ ಬದಲಾವಣೆಯನ್ನು ತರಬಲ್ಲದು ಎಂದು ಎಂದು ಟ್ರೈನ್ಡ್ ನರ್ಸಸ್ ಅಸೋಸಿಯೇಷನ್ ಆಫ್ ಇಂಡಿಯಾದ ಕಾರ್ಯದರ್ಶಿ ಜನರಲ್ ಎವ್ಲಿನ್ ಪಿ. ಕಣ್ಣನ್ ಅಭಿಪ್ರಾಯಪಟ್ಟರು.
ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಡಿಟೋರಿಯಂನಲ್ಲಿ ನಿಟ್ಟೆ ಪರಿಗಣಿಸಲ್ಪಟ್ಟ ವಿ.ವಿ.ಯ ವ್ಯಾಪ್ತಿಯ ನಿಟ್ಟೆ ಉಷಾ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಇದರ “ಸಮನ್ವಯ 2K26” ವಾರ್ಷಿಕೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ನರ್ಸ್‌ಗಳು ಸಮಾಜದಲ್ಲಿ ಮಹತ್ತರ ಸೇವೆ ಸಲ್ಲಿಸುತ್ತಿದ್ದು ಮಾನವೀಯತೆಯ ಸಂಕೇತವಾಗಿದ್ದಾರೆ.ನರ್ಸ್‌ಗಳು ತಮ್ಮ ವೃತ್ತಿಯಲ್ಲಿ ಸದಾ ಪ್ರಾಮಾಣಿಕತೆ, ನಿಷ್ಠೆ ಮತ್ತು ವಿಶ್ವಾಸವನ್ನು ಕಾಪಾಡಿಕೊಂಡು ಕಾರ್ಯನಿರ್ವಹಿಸಬೇಕು. ವೈದ್ಯಕೀಯ ಕ್ಷೇತ್ರದಲ್ಲಿ ಜ್ಞಾನ ಬಹಳ ಅಗತ್ಯವಾಗಿದ್ದು, ನರ್ಸ್‌ಗಳು ತಮ್ಮ ಜ್ಞಾನವನ್ನು ನಿರಂತರವಾಗಿ ನವೀಕರಿಸಿಕೊಳ್ಳುವುದು ಅತ್ಯಂತ ಮುಖ್ಯ. 1908ರಲ್ಲಿ ಕೇವಲ 9 ಯುರೋಪಿಯನ್ ನರ್ಸ್‌ಗಳು ಸೇರಿ ಟ್ರೇಂಡ್ ನರ್ಸಸ್ ಅಸೋಸಿಯೇಶನ್ ಆಫ್ ಇಂಡಿಯಾ (TNAI) ಸ್ಥಾಪಿಸಿದ್ದು, ಅವರ ದೃಷ್ಟಿಕೋನ ಮತ್ತು ಸೇವಾ ಮನೋಭಾವದಿಂದ ಇಂದು ಭಾರತದಲ್ಲಿ ನರ್ಸಿಂಗ್ ಕ್ಷೇತ್ರವು ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಂಡಿದೆ. ಜೀವನದಲ್ಲಿ ನಾವು ಎಷ್ಟು ವರ್ಷ ಬದುಕುತ್ತೇವೆ ಎಂಬುದು ಮುಖ್ಯವಲ್ಲ; ನಾವು ಹೇಗೆ ಬದುಕುತ್ತೇವೆ ಮತ್ತು ಸಮಾಜಕ್ಕೆ ಯಾವ ರೀತಿಯ ಕೊಡುಗೆ ನೀಡುತ್ತೇವೆ ಎಂಬುದೇ ಮುಖ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಪರಿಗಣಿಸಲ್ಪಟ್ಟ ವಿ.ವಿ.ಯ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಪ್ರೊ. ಡಾ. ಗೋಪಾಲ್ ಮುಗೇರಾಯ ಮಾತನಾಡಿ, ವೈದ್ಯರು ರೋಗವನ್ನು ಚಿಕಿತ್ಸೆ ನೀಡುತ್ತಾರೆ, ಆದರೆ ನರ್ಸ್‌ಗಳು ರೋಗಿಯನ್ನು ಚಿಕಿತ್ಸೆ ನೀಡಿ ಆರೈಕೆ ಮಾಡುತ್ತಾರೆ. ನರ್ಸ್‌ಗಳು ಕೇವಲ ಆರೈಕೆಗಾರರಷ್ಟೇ ಅಲ್ಲ, ಅವರು ಚಿಕಿತ್ಸೆ ನೀಡುವವರು,ಸಲಹೆಗಾರ ಮತ್ತು ಬೋಧಕರಾಗಿಯೂ ಕಾರ್ಯನಿರ್ವಹಿಸುತ್ತಾರೆ. ರೋಗಿ ಮತ್ತು ವೈದ್ಯರ ನಡುವಿನ ನಂಬಿಕೆಯ ಪ್ರತಿಬಿಂಬವಾಗಿರುವ ನರ್ಸ್‌ಗಳು ಆರೋಗ್ಯ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ನರ್ಸ್‌ಗಳು ಸದಾ ಸಮಸ್ಯೆಯ ಮೂಲ ಕಾರಣವನ್ನು ಗುರುತಿಸಿ ಚಿಕಿತ್ಸೆ ನೀಡಲು ಪ್ರಯತ್ನಿಸುತ್ತಾರೆ. ಆರೋಗ್ಯ ವ್ಯವಸ್ಥೆಯ ಮೇಲಿನ ನಿಷ್ಠೆ ಮತ್ತು ಸೇವಾ ಮನೋಭಾವದಿಂದ ಅವರು ಕಾರ್ಯನಿರ್ವಹಿಸುತ್ತಾರೆ ಎಂದರು.
ವಾರ್ಷಿಕ ವರದಿಯನ್ನು ಪ್ರಾಂಶುಪಾಲರಾದ ಡಾ.ಫಾತಿಮಾ ಡಿಸಿಲ್ವ ಮಂಡಿಸಿದರು. ಮಾನಸಿಕ ಆರೋಗ್ಯ ನರ್ಸಿಂಗ್ ವಿಭಾಗದ ಉಪನ್ಯಾಸಕಿ ಪ್ರತಿಭಾ ಶೆರಿಗಾರ್ತಿ ಹಾಗೂ ಎಸ್‌ಎನ್‌ಎ ಸಲಹೆಗಾರ್ತಿ ಉಪನ್ಯಾಸಕಿ ಶೆರಿಲ್ ಫರ್ನಾಂಡಿಸ್ ಉಪಸ್ಥಿತರಿದ್ದರು.
ಅಕಾಡೆಮಿಕ್ ಟಾಪರ್ ಗಳಾದ ಎಂ.ಎಸ್ .ಸಿ ನರ್ಸಿಂಗ್ ನ ಮಿಸ್ ಚಿಸಾಲೆ ರೋಸೆಲಿನ್ ಡಾಕ್ರು. ಪಿ.ಬಿ.ಬಿ.ಎಸ್ .ಸಿ ನರ್ಸಿಂಗ್ ನ ಖೋಬೆನಿ ಮುರೇ ಮತ್ತು ಬಿ.ಎಸ್ .ಸಿ ನರ್ಸಿಂಗ್ ನ ಮಿಸ್ ಗ್ಯುರ್ಮೇ ಲ್ಲಾಮೋ ಇವರನ್ನು ಅಭಿನಂದಿಸಲಾಯಿತು.
2025ರಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ, ಅತ್ಯುತ್ತಮ ಸಂಶೋಧಕ ಪ್ರಶಸ್ತಿ ಹಾಗೂ ಅತ್ಯುತ್ತಮ ಸಂಶೋಧನಾ ಪ್ರಬಂಧ ಪ್ರಶಸ್ತಿ ಪಡೆದ ಪ್ರೊ. ಡಾ. ಜೆಸಿಂತಾ ವೇಗಸ್, ಅತ್ಯುತ್ತಮ ಯೂತ್ ರೆಡ್ ಕ್ರಾಸ್ ಆಫೀಸರ್ (ತೃತೀಯ ಸ್ಥಾನ) ಗೌರವ ಪಡೆದ ಡಾ. ಲತಾ ಎಸ್. ಹಾಗೂ ಕಾಪಿರೈಟ್ ಗಳನ್ನು ಯಶಸ್ವಿಯಾಗಿ ಪಡೆದ ಅಧ್ಯಾಪಕರಾದ ವೀರೇಶ್ ಕಡೇಮಣಿ. ಡಾ. ಲತಾ ಎಸ್. ಕುಮಾರಿ, ಶೆರಿಲ್ ಫೆರ್ನಾಂಡಿಸ್ ಮತ್ತು ಪ್ರೊ. ಡಾ. ಜೆಸಿಂತಾ ವೇಗಸ್ ಅವರನ್ನು ಶೈಕ್ಷಣಿಕ, ಸಂಶೋಧನಾ ಮತ್ತು ವಿಸ್ತರಣೆಗಾಗಿ ಅಭಿನಂದಿಸಲಾಯಿತು.
ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪ್ರತಿಭಾ ಪ್ರದರ್ಶನಗಳು ನಡೆಯಿತು.
ಅಫ್ರೀನ್ ಕಾರ್ಯಕ್ರಮ ನಿರೂಪಿಸಿದರು. ಡಾ. ಸಬಿತಾ ನಾಯಕ್ ಸ್ವಾಗತಿಸಿದರು. ಕ್ಲೀಟಾ ಪಿಂಟೋ ವಂದಿಸಿದರು.