Site icon Ullalavani

ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ಧಾರಿಗಳಿಗೆ ಶಾಕಿಂಗ್ ಸುದ್ದಿ ; 20 ಲಕ್ಷ ಕಾರ್ಡ್ ರದ್ದು..!

ಬೆಂಗಳೂರು, ಮಾ. 04: ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ಧಾರಿಗಳಿಗೆ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಅರ್ಹ ಕುಟುಂಬಗಳಿಗೆ ಮಾತ್ರ ರೇಷನ್ ಹಾಗೂ ವಿವಿಧ ಕಲ್ಯಾಣ ಯೋಜನೆಗಳ ಸೌಲಭ್ಯಗಳು ತಲುಪುವಂತೆ ಮಾಡಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಭಾರೀ ಪ್ರಮಾಣದಲ್ಲಿ ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣೆ ಕಾರ್ಯಾಚರಣೆ ನಡೆಸಲಾಗಿದೆ.

ಕೇಂದ್ರ ಸರ್ಕಾರವು 13 ಲಕ್ಷ ಕಾರ್ಡ್‌ಗಳ ಪರಿಷ್ಕರಣೆ ಪಟ್ಟಿ ಸಿದ್ಧಪಡಿಸಿದ್ದರೆ, ರಾಜ್ಯ ಸರ್ಕಾರ 8 ಲಕ್ಷ ಕಾರ್ಡ್‌ಗಳನ್ನು ರದ್ದುಪಡಿಸಲು ಪ್ರತ್ಯೇಕ ಪಟ್ಟಿ ಮಾಡಿತ್ತು. ಇದೀಗ ಆಹಾರ ಇಲಾಖೆಯ ಮಾಹಿತಿ ಪ್ರಕಾರ, ಕಳೆದ ಎಂಟು ತಿಂಗಳಿನಲ್ಲಿ ಒಟ್ಟು 20 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ ಎಂಬ ಅಚ್ಚರಿ ಮಾಹಿತಿಯು ಬೆಳಕಿಗೆ ಬಂದಿದೆ.ಇದರೊಂದಿಗೆ 14.5 ಲಕ್ಷ ಕಾರ್ಡ್‌ಗಳನ್ನು ಬಿಪಿಎಲ್‌ನಿಂದ ಎಪಿಎಲ್‌ಗೆ ವರ್ಗಾವಣೆ ಮಾಡಲಾಗಿದೆ. ಅರ್ಹತೆ ಇಲ್ಲದ ಕುಟುಂಬಗಳನ್ನು ಗುರುತಿಸಿ ಪಟ್ಟಿ ಹೊರಗಿಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.ರದ್ದಾದ ಕಾರ್ಡ್‌ಗಳಲ್ಲಿ 9,826 ಕಾರ್ಡ್‌ಗಳು ಅಮಾನತು ಆಗಿದ್ದರೆ, 34,617 ಕಾರ್ಡ್‌ಗಳು ನೇರವಾಗಿ ರದ್ದುಪಡಿಸಲಾಗಿದೆ. ಮರು ಪರಿಶೀಲನೆ ಪ್ರಕ್ರಿಯೆಯಲ್ಲಿಯೂ ಸುಮಾರು 4 ಲಕ್ಷ ಕಾರ್ಡ್‌ಗಳು ರದ್ದಾಗಿದ್ದು, ಇನ್ನೂ 4 ಲಕ್ಷ ಕಾರ್ಡ್‌ಗಳನ್ನು ಬಿಪಿಎಲ್‌ನಿಂದ ಎಪಿಎಲ್‌ಗೆ ವರ್ಗಾವಣೆ ಮಾಡಲಾಗಿದೆ.ಜಿಲ್ಲಾವಾರು ಪರಿಷ್ಕರಣೆ ನೋಡಿದರೆ, ಬಳ್ಳಾರಿ ಜಿಲ್ಲೆ ಮೊದಲ ಸ್ಥಾನದಲ್ಲಿದ್ದು, 1.91 ಲಕ್ಷ ಕಾರ್ಡ್‌ಗಳು ರದ್ದು ಅಥವಾ ಎಪಿಎಲ್‌ಗೆ ವರ್ಗಾವಣೆಗೊಂಡಿವೆ. ವಿಜಯಪುರ ಜಿಲ್ಲೆಯಲ್ಲಿ 95,037 ಕಾರ್ಡ್‌ಗಳು ರದ್ದುಪಡಿಸಲ್ಪಟ್ಟಿವೆ. ಕೊಡಗು ಜಿಲ್ಲೆಯಲ್ಲಿ 94,423 ಕಾರ್ಡ್‌ಗಳು ರದ್ದಾಗಿದ್ದು, ಬೆಂಗಳೂರಿನಲ್ಲಿ ಸುಮಾರು 2 ಲಕ್ಷ ಬಿಪಿಎಲ್ ಕಾರ್ಡ್‌ಗಳು ರದ್ದುಪಡಿಸಲಾಗಿದೆ.ಕರ್ನಾಟಕದಲ್ಲಿ ಬಿಪಿಎಲ್ ಕಾರ್ಡ್ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ನೀಡಲಾಗುವ ಪಡಿತರ ಚೀಟಿಯಾಗಿದ್ದು, ಇದರ ಮೂಲಕ ಕಡಿಮೆ ದರದಲ್ಲಿ ಧಾನ್ಯಗಳು ಹಾಗೂ ಇತರೆ ಅಗತ್ಯ ವಸ್ತುಗಳನ್ನು ಪಡೆಯಲು ಅವಕಾಶವಿದೆ. ಹೊಸ ಸದಸ್ಯರನ್ನು ಕಾರ್ಡ್‌ಗೆ ಸೇರಿಸಲು ಪೋಷಕರ ಆಧಾರ್ ಕಾರ್ಡ್, ಮಕ್ಕಳ ಜನನ ಪ್ರಮಾಣಪತ್ರ ಹಾಗೂ ಆದಾಯ ಪ್ರಮಾಣಪತ್ರ ಸಲ್ಲಿಕೆ ಕಡ್ಡಾಯವಾಗಿದೆ.ರಾಜ್ಯ ಸರ್ಕಾರದ ಈ ಭಾರೀ ಪರಿಷ್ಕರಣೆ ಕ್ರಮದಿಂದ ಅನರ್ಹರ ಕಾರ್ಡ್‌ಗಳು ರದ್ದಾಗುತ್ತಿದ್ದು, ನಿಜವಾದ ಫಲಾನುಭವಿಗಳಿಗೆ ಸೌಲಭ್ಯಗಳು ಸಮರ್ಪಕವಾಗಿ ತಲುಪುವ ನಿರೀಕ್ಷೆ ವ್ಯಕ್ತವಾಗಿದೆ.

Exit mobile version