ಕೊಣಾಜೆ: ಸಮಾನತೆಯಿಂದ ಮಾತ್ರ ಸಾಮಾಜಿಕ ಅಭಿವೃದ್ಧಿ ಸಾಧ್ಯ ಜೊತೆಗೆ ಸಮಸಮಾಜದ ಚಿಂತನೆಯೊಂದಿಗೆ ಯುವ ಸಮುದಾಯ ಶಿಕ್ಷಣ, ಜ್ಞಾನ, ಕೌಶಲದೊಂದಿಗೆ ಮುನ್ನಡೆದರೆ ದೇಶವು ನೈಜ ಪ್ರಗತಿಯತ್ತ ಹೆಜ್ಜೆ ಇಡಬಲ್ಲುದು ಎಂಬುದು ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿಕಲ್ಪನೆಯಾಗಿತ್ತು ಎಂದು ದಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎ. ಎಂ. ಖಾನ್ ಅವರು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ, ಹಾಗೂ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣ ಕೇಂದ್ರದ ಸಹಯೋಗದೊಂದಿಗೆ, “ಡಾ. ಬಿ.ಆರ್. ಅಂಬೇಡ್ಕರ್ ಅವರ ದೃಷ್ಟಿಕೋನದಲ್ಲಿ ಅಭಿವೃದ್ಧಿಯ ಭಾರತ” ಎಂಬ ವಿಷಯದಲ್ಲಿ ಎರಡು ದಿನಗಳ ಕಾಲ ನಡೆದ ವಿಚಾರ ಸಂಕಿರಣವನ್ನು ವಿವಿಯ ಮಂಗಳ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ಪ್ರಜಾಪ್ರಭುತ್ವ ಇದ್ದರೆ ಮಾತ್ರ ರಾಜಕೀಯ ಪ್ರಜಾಪ್ರಭುತ್ವ ವ್ಯವಸ್ಥೆಯು ಸರಿಯಾದ ಹಾದಿಯಲ್ಲಿ ಸಾಗಲು ಸಾಧ್ಯ ಎಂಬುದು ಅಂಬೇಡ್ಕರ್ ಅವರ ಪರಿಕಲ್ಪನೆಯಾಗಿತ್ತು ಹಾಗೂ ಯುವಸಮುದಾಯ ,ಮಹಿಳೆ , ರೈತರು ವಿಕಸಿತ ಭಾರತದ ಆಧಾರ ಸ್ಥಂಬ ಎಂದು ಬಣ್ಣಿಸಿದ್ದರು ಎಂದರು.
ಮುಖ್ಯ ಅತಿಥಿ ಯಾಗಿಭಾಗವಹಿಸಿ ಮಾತನಾಡಿದ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣ ಕೇಂದ್ರದ ನಿರ್ದೇಶಕರಾದ ಡಾ. ಸಾಬೀರ್ ಅಹ್ಮದ್ ಮುಲ್ಲಾ ಅವರು ಅಂಬೇಡ್ಕರ್ ಪ್ರತಿಮೆಗಳು ಮಾತ್ರವಲ್ಲ ಅವರ ವಿಚಾರಧಾರೆಗಳು ಜನಸಾಮ್ಯರೆಡಗೆೆ ತಲುಪಬೇಕಿದೆ. ಆದ್ದರಿಂದ ಇಂತಹ ಮಹತ್ವದ ವಿಚಾರ ಸಂಕಿರಣಗಳನ್ನು ಆಯೋಜಿಸಿಕೊಳ್ಳಲಾಗಿದೆ ಎಂದರು.
ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್ .ಧರ್ಮ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಮಂಗಳೂರು ವಿವಿ ಹಣಕಾಸು ಅಧಿಕಾರಿ ಪಂಚಲಿಂಗ ಸ್ವಾಮಿ, ಪರೀಕ್ಷಾಂಗ ಕುಲಸಚಿವ ಪ್ರೊ.ದೇವೇಂದ್ರಪ್ಪ ಉಪಸ್ಥಿತರಿದ್ದರು.
ಮಂಗಳೂರು ವಿವಿಯ ಡಾ.ಬಿ.ಆರ್ .ಅಂಬೇಡ್ಕರ್ ಅಧ್ಯಯನ ಕೇಂದ್ರದ ಪ್ರೊ.ರಾಜು ಕೃಷ್ಣ ಚಳನ್ನವರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಯಶುಕುಮಾರ್ ಅವರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಮಾಜಿಕ ನ್ಯಾಯ, ಸಮಗ್ರ ಅಭಿವೃದ್ಧಿ, ಸಾಂವಿಧಾನಿಕ ಮೌಲ್ಯಗಳು ಮತ್ತು ರಾಷ್ಟ್ರ ನಿರ್ಮಾಣದ ಕುರಿತು ಡಾ. ಬಿ.ಆರ್. ಅಂಬೇಡ್ಕರ್ ಅವರ ವಿವಿಧ ದೃಷ್ಟಿಕೋನಗಳ ಕುರಿತು ಗೋಷ್ಠಿಗಳು ನಡೆದವು.