Site icon Ullalavani

ಬ್ಲೇಡ್ ಕಂಪನಿ `ವೆಕ್ಸನ್’ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲು…!

ಮಂಗಳೂರು, ಫೆ. 28; ಜೈನ್ ಲಿಂಕ್ ಹೆಸರಲ್ಲಿ ಜನಸಾಮಾನ್ಯರನ್ನು ಮೋಸಗೊಳಿಸಿ ಕೋಟಿ ಕೋಟಿ ಹಣ ಲೂಟಿ ಮಾಡುತ್ತಿರುವ ಬ್ಲೇಡ್ ಕಂಪನಿ ವೆಕ್ಸನ್ ವಿರುದ್ಧ ಮಂಗಳೂರಿನ ಕದ್ರಿ ಠಾಣೆಯಲ್ಲಿ ಕೊನೆಗೂ ಎಫ್ಐಆರ್ ದಾಖಲಾಗಿದೆ.

ಹಣ ಕೊಟ್ಟು ಮೋಸ ಹೋಗಿರುವ ವಿದ್ಯಾರ್ಥಿನಿಯೊಬ್ಬರ ದೂರಿನಂತೆ ಪ್ರಕರಣ ದಾಖಲಾಗಿದೆ. ವೆಕ್ಸನ್ ಎನ್ನುವುದು ಮಹಾರಾಷ್ಟ್ರ ಮೂಲದ ನಕಲಿ ಕಂಪನಿಯಾಗಿದ್ದು ಕುದ್ರೋಳಿಯ ಅಳಕೆಯಲ್ಲಿ ಕಾರ್ಯಾಚರಿಸುತ್ತಿದೆ. ಸಂಸ್ಥೆಯ ಸ್ಥಾಪಕ ದಿಗ್ವಿಜಯ್ ದೇಸಾಯಿ, ಸಹ ಸಂಸ್ಥಾಪಕರಾದ ರಾಮಚಂದ್ರ ತೇವಳ, ಸುನಿಲ್ ಸಾವಂತ, ಅನಾನ್ ಅಹೈರ್, ಮಂಗಳೂರಿನ ಕಚೇರಿಯಲ್ಲಿ ಉದ್ಯೋಗಿಗಳಾಗಿರುವ ಪಲ್ಲವಿ, ಅಂಜಲಿ, ನವ್ಯಾ ನಿವೇಶ್, ಜಯಶ್ರೀ ಮತ್ತು ಜುನೈದ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.ಈ ಪೈಕಿ ಅಂಜಲಿ, ನವ್ಯಾ ಬೇರೆ ಬೇರೆ ಕಾಲೇಜುಗಳ ವಿದ್ಯಾರ್ಥಿನಿಯರಾಗಿದ್ದಾರೆ. ಕಳೆದ ಜನವರಿ ತಿಂಗಳಲ್ಲಿ ತನ್ನ ಪರಿಚಯದ ನವ್ಯಾ ಎಂಬಾಕೆ ಮಧ್ಯಾಹ್ನ 2ರಿಂದ 5 ಗಂಟೆಯವರೆಗೆ ಪಾರ್ಟ್ ಟೈಮ್ ಕೆಲಸವಿದ್ದು, ತಿಂಗಳಿಗೆ 15 ಸಾವಿರದಿಂದ 30 ಸಾವಿರ ದುಡಿಯಬಹುದು ಎಂದು ಹೇಳಿ ವೆಕ್ಷನ್ ಕಂಪನಿಗೆ ಕರೆದೊಯ್ದಿದ್ದಳು. ಮೊದಲಿಗೆ ವೆಬ್ ಡೆವಲಪರ್, ವೆಬ್ ಡಿಸೈನರ್, ಡಾಟಾ ಎಂಟ್ರಿ ಜಾಬ್ ಎಂದು ಕೆಲಸಕ್ಕೆ ಕರೆದಿದ್ದು, ಅಲ್ಲಿ ಮೂರು ದಿನದ ವಸತಿ ಸಹಿತ ತರಬೇತಿಯೆಂದು ಹೇಳಿ 2500 ರೂ. ಪಡೆದಿದ್ದರು. ಆದರೆ ತರಬೇತಿ ಬದಲು ಮಾರ್ಕೆಟಿಂಗ್ ಮಾಡಲು ಹೇಳಿದ್ದು, ಇದರಿಂದ ದೊಡ್ಡ ಮೊತ್ತ ಸಂಪಾದಿಸಬಹುದು ಎಂದು ಹೇಳಿ ಬ್ರೇನ್ ವಾಷ್ ಮಾಡಿದ್ದಾರೆ.

51 ಸಾವಿರ ಕಟ್ಟಿದರೆ ನಿಮಗೆ ಹಲವಾರು ಇಲೆಕ್ಟ್ರಾನಿಕ್, ಕಾಸ್ಕೆಟಿಕ್ ವಸ್ತುಗಳು ಸಿಗುತ್ತವೆ, ಅದೇ ರೀತಿ ನೀವು ನಿಮ್ಮ ಗೆಳೆಯ-ಗೆಳತಿಯರನ್ನು ಕಂಪನಿಗೆ ಸೇರಿಸಿದರೆ ಉತ್ತಮ ಕಮಿಷನ್ ಸಿಗುತ್ತದೆ ಎಂದು ಹೇಳಿ ನಂಬಿಸಿದ್ದಾರೆ. ಮನೆಯಲ್ಲಿ ಸಾಲ ಮಾಡಿ ಹಣ ಕೊಟ್ಟಿದ್ದು ಮೋಸ ಹೋಗಿದ್ದೇನೆ. ಇದೇ ರೀತಿ ಹಲವಾರು ಮಂದಿ ಅಲ್ಲಿದ್ದು, ಮೋಸಕ್ಕೆ ಒಳಗಾಗಿದ್ದಾರೆ. ಅಲ್ಲಿ ಸಿಕ್ಕಿರುವ ವಸ್ತುಗಳೂ ಗುಣಮಟ್ಟದ್ದಲ್ಲ. ಅದೂ ನಕಲಿಯಾಗಿದ್ದು ನಮ್ಮ ಕಾಲೇಜಿನವರಿಗೆ ತಿಳಿಸಿ ತಡವಾಗಿ ದೂರು ನೀಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಕದ್ರಿ ಠಾಣೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯಡಿ ಕೇಸು ದಾಖಲಿಸಿದ್ದಾರೆ.

Exit mobile version