ಮಂಗಳೂರು,ಫೆ. 28: ಸ್ನೇಹಿತನ ಬ್ಯಾಂಕ್ ಖಾತೆಯನ್ನು ಪಡೆದು ಸೈಬರ್ ವಂಚನೆ ಪ್ರಕರಣಕ್ಕೆ ಬಳಸಿ ಬಳಿಕ ಮೋಸ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸೈಬರ್ ಅಪರಾಧ ಠಾಣೆಯ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ಆಂಧ್ರಪ್ರದೇಶದ ನೆಲ್ಲೂರಿನ ಶೇಖ್ ಕರೀಮುಲ್ಲಾ ಯಾನೆ ರಸೂಲ್ (27) ಮತ್ತು ಉತ್ಪಲ ಸಂತೋಷ್ ಕೃಷ್ಣ (35), ಕರ್ನೂಲಿನ ಬುಡಿದಿನ್ನೆ ವಂಶಿ ಯಾನೆ ಗುರು (21), ತೆಲಂಗಾಣದ ಪಂಡಿತಿ ಕ್ರಾಂತಿ ಕುಮಾರ್ (36), ಬುಡೆ ಶ್ರೀನಿವಾಸ (38) ಮತ್ತು ಮುಲ್ಕಿಯ ಇಬ್ರಾಹೀಂ (35) ಎಂದು ಗುರುತಿಸಲಾಗಿದೆ.ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ 18 ಮೊಬೈಲ್, 1 ಲ್ಯಾಪ್‌ಟಾಪ್, 12 ಸಿಮ್‌ಕಾರ್ಡ್, 15 ಚೆಕ್‌ಬುಕ್, 12 ಬ್ಯಾಂಕ್ ಪಾಸ್‌ಬುಕ್, 18 ಡೆಬಿಟ್ ಕಾರ್ಡ್‌ಗಳನ್ನು ವಶಪಡಿಸಲಾಗಿದೆ.ಆರೋಪಿತರುಗಳು ಸಾಮಾಜಿಕ ಮಾಧ್ಯಮಗಳ ಮುಖಾಂತರ ಅಕರ್ಷಕ ಜಾಹೀರಾತುಗಳನ್ನು ನೀಡಿ ಬ್ಯಾಂಕ್ ಖಾತೆದಾರರಿಗೆ ಸಂಪೂರ್ಣ ವಿವರವನ್ನು ಪಡೆದು ಓಟಿಪಿಯನ್ನು ಪಡೆದುಕೊಂಡು ವಿದೇಶದಲ್ಲಿರುವ ಸೈಬರ್ ವಂಚಕರಿಗೆ ರವಾನಿಸುತ್ತಿರುವುದು ತನಿಖೆಯ ವೇಳೆ ತಿಳಿದು ಬಂದಿದೆ.ಪ್ರಕರಣದಲ್ಲಿ ತಾಂತ್ರಿಕ ಸಾಕ್ಷ್ಯಧಾರಗಳನ್ನು ಕಲೆ ಹಾಕಿ ಪರಿಶೀಲಿಸಿದಾಗ ಹೈದರ್‌ಬಾದ್‌ನಲ್ಲಿ ಸೈಬರ್ ವಂಚನೆ ತಂಡ ಕಾರ್ಯಚರಿಸುತ್ತಿದ್ದಿದ್ದು ತಿಳಿದು ಬಂದಿದೆ. ಸೈಬರ್ ಅಪರಾಧ ಪೊಲೀಸ್ ತಂಡವು ಹೈದರಬಾದ್‌ಗೆ ತೆರಳಿ ಸೈಬರ್ ವಂಚನೆ ತಂಡವನ್ನು ಪತ್ತೆ ಮಾಡಿ 5 ಜನರನ್ನು ಹೈದರ್‌ಬಾದ್‌ನಲ್ಲಿ, ಓರ್ವ ಆರೋಪಿಯನ್ನು ಮಂಗಳೂರಿನಲ್ಲಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.