Site icon Ullalavani

ಪತ್ನಿ ಮಕ್ಕಳನ್ನು ಕಡಿದು ಕೊಂದು ಮಂಚಿ ಪಂ. ಸದಸ್ಯ ಆತ್ಮಹತ್ಯೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಬಂಟ್ವಾಳ: ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕತ್ತಿಯಿಂದ ಕಡಿದು ಮಂಚಿ ಪಂಚಾಯಿತಿ ಸದಸ್ಯ ಆತ್ಮಹತ್ಯೆ ಗೈದಿರುವ ಹೃದಯಾ ವಿದ್ರಾವಕ ಘಟನೆ ಇರಾ ಸಮೀಪದ ಮಂಚಿ ಎಂಬಲ್ಲಿ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.

ಮಂಚಿ ಪಂಚಾಯತ್ ಸದಸ್ಯ ಪದ್ಮನಾಭ ಆತನ ಪತ್ನಿ ಹಾಗೂ ಮಕ್ಕಳಾದ ಪೂರ್ವಿ ಮತ್ತು ಪೃಥ್ವಿ ಇವರನ್ನು ಕತ್ತಿಯಿಂದ ಕಡಿದು ತಾನು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಳಿಗ್ಗೆ ಇವರ ಮನೆ ಸಮೀಪ ಪಿಕಪ್ ವಾಹನದಲ್ಲಿ ಬಂದವರು ಘಟನೆಯನ್ನು ಬೆಳಕಿಗೆ ತಂದಿದ್ದಾರೆ. ಮಧ್ಯರಾತ್ರಿಯಲ್ಲಿ ಪದ್ಮನಾಭ ಕೃತ್ಯ ಎಸಗಿರುವುದಾಗಿ ಶಂಕಿಸಲಾಗಿದೆ.

ಮಾಟ ಮಂತ್ರದ ಅಭ್ಯಾಸ:

ಎಂದಿನಂತೆ ಮನೆಯಲ್ಲಿ ಪದ್ಮನಾಭ ಅವರ ತಾಯಿ ಹಾಗೂ ಪಕ್ಕದ ಮನೆಯ ಹುಡುಗಿಯೋರ್ವಳು ಇರುತ್ತಿದ್ದರು. ಮಂಗಳವಾರ ಸಂಜೆ ಮನೆಯಲ್ಲಿ ಸಮಸ್ಯೆಯಿದ್ದು ಅದಕ್ಕಾಗಿ ಮೂಳಿಗೆಯೊಂದನ್ನು ಮಾಡಲಿದ್ದೇನೆ ನೀವಿಬ್ಬರು ಇಂದು ಸಹೋದರನ ಮನೆಗೆ ಹೋಗಿ ಎಂದು ತಿಳಿಸಿದ್ದನು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಕೆಲವು ದಿನಗಳಿಂದ ಮಾನಸಿಕವಾಗಿ ನೊಂದಿದ್ದ ಪದ್ಮನಾಭ ಮನೆಯಲ್ಲಿ ಸಮಸ್ಯೆ ಇರುವುದಾಗಿ ಹಲವರಲ್ಲಿ ಹೇಳಿಕೊಂಡಿದ್ದನು ಎಂದು ತಿಳಿದುಬಂದಿದೆ.

ಡೆತ್ ನೋಟ್

ಘಟನೆ ನಡೆದ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು ತನ್ನ ಆಕೌಂಟ್ ನಲ್ಲಿ ಇಂತಿಷ್ಟು ಹಣವಿದ್ದು ಅದನ್ನು ತಾಯಿಯ ಶೂಶ್ರೂಷೆ ತೆಗೆದುಕೊ ಎಂದು ಸಹೋದರನಿಗೆ ಬರೆದಿದ್ದಾನೆ. ಸಾವಿಗೆ ಯಾವುದೇ ನಿಖರವಾದ ಕಾರಣವನ್ನು ಬರೆದಿಲ್ಲ.
ಬಂಟ್ವಾಳ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಶವಗಳನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಶವ ಮಹಜರಿಗಾಗಿ ಕಳುಹಿಸಲಾಗಿದೆ.

ಮಕ್ಕಳಿಬ್ಬರು ಪ್ರತಿಭಾನ್ವಿತರು:
ಕುಕ್ಕಾಜೆ ಪ್ರಗತಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಪೃಥ್ವಿ ೪ನೇ ತರಗತಿಯಲ್ಲಿ ಕಲಿಯುತ್ತಿದ್ದು, ಪೂರ್ವಿ ೨ನೇ ತರಗತಿಯಲ್ಲಿ ಕಲಿಯುತ್ತಿದ್ದರು. ಇಬ್ಬರು ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿದ್ದು, ಪ್ರತಿ ಪರೀಕ್ಷೆಯಲ್ಲೂ ಶೇಕಡಾ ೯೦ಕ್ಕಿಂತ ಹೆಚ್ಚು ಅಂಕವನ್ನು ಪಡೆದು ಶಿಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಈ ವಿದ್ಯಾರ್ಥಿಗಳಿಬ್ಬರ ಸಾವು ಶಾಲೆಗೆ ಭರಿಸಲಾಗದ ನಷ್ಟವಾಗಿದ್ದು, ಇಡೀ ಶಾಲೆಯೇ ಶೋಕಸಾಗರದಲ್ಲಿ ಮುಳುಗಿದ್ದು ಶಾಲೆಯ ಶಿಕ್ಷಕರು ಮಕ್ಕಳ ಸಾವಿಗೆ ಕಂಬನಿಯನ್ನು ಮಿಡಿದಿದ್ದಾರೆ.

Exit mobile version