Site icon Ullalavani

ಸುಳ್ಯ: ಗಾಳಿ-ಮಳೆಗೆ ಜನಜೀವನ ಅಸ್ತವ್ಯಸ್ತ…!

ಸುಳ್ಯ, ಫೆ. 26: ಸುಳ್ಯ ತಾಲೂಕಿನಾದ್ಯಂತ ಗುಡುಗು ಸಹಿತ ಗಾಳಿ-ಮಳೆಯಾಗಿದ್ದು, ಸುಳ್ಯ ಸಗರ ಸೇರಿದಂತೆ ತಾಲೂಕಿನ ವಿವಿಧ ಭಾಗಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಮರಗಳು ಉರುಳಿ ಬಿದ್ದು ಮನೆ ಹಾಗೂ ಕಟ್ಟಡಗಳಿಗೆ ಹಾನಿಯುಂಟಾಗಿದೆ.

ಸುಳ್ಯ ನಗರ, ಸಂಪಾಜೆ, ಕಲ್ಲುಗುಂಡಿ, ಅರಂತೋಡು, ಬೆಳ್ಳಾರೆ, ಮಂಡೆಕೋಲು, ಅಜ್ಜಾವರ, ಎಲಿಮಲೆ, ದೊಡ್ಡತೋಟ, ಸೋಣಂಗೇರಿ ಮತ್ತು ಪೆರುವಾಜೆ ಪರಿಸರದಲ್ಲಿ ಭಾರೀ ಗಾಳಿ-ಮಳೆ ಸುರಿದಿದೆ.ಸುಳ್ಯದ ಗುರುಂಪು ನಿವಾಸಿ ಮುನೀರ್ ಎಂಬುವವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಸಂಪಾಜೆಯ ಪೆಲ್ತಡ್ಕದಲ್ಲಿ ಚಂದ್ರಾವತಿ ಎಂಬುವವರ ಮನೆಗೆ ಹಾಗೂ ಗೂನಡ್ಕದ ರಾಜ ಎಂಬುವವರ ಮನೆಯ ಮೇಲೆ ತೆಂಗಿನ ಮರಗಳು ಬಿದ್ದು ಹಾನಿ ಸಂಭವಿಸಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.ಎಲಿಮಲೆಯಲ್ಲಿ ತೆಂಗಿನ ಮರವು ಎಲಿಮಲೆ ನೂರುಲ್ ಹುದಾ ಮದ್ರಸ ಕಟ್ಟಡದ ಮೇಲೆ ಬಿದ್ದಿದ್ದು, ಕಟ್ಟಡಕ್ಕೆ ಭಾಗಶಃ ಹಾನಿಯಾಗಿದೆ.ಗಾಳಿಯ ವೇಗಕ್ಕೆ ತಾಲೂಕಿನ ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ. ತೋಟಗಾರಿಕಾ ಬೆಳೆಗಳಿಗೂ ಈ ಅಕಾಲಿಕ ಮಳೆಯಿಂದ ಹಾನಿಯಾಗಿರುವ ಸಾಧ್ಯತೆಯಿದೆ.

Exit mobile version