Site icon Ullalavani

ದೇವಸ್ಥಾನದಲ್ಲಿ ರೀಲ್ಸ್‌ ಮಾಡೋರಿಗೆ ಶಾಕ್…!

ಬೆಂಗಳೂರು, ಫೆ. 20: ರಾಜ್ಯದಲ್ಲಿ ದೇವಸ್ಥಾನಗಳು ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ರೀಲ್ಸ್ ಮತ್ತು ವೀಡಿಯೋ ಶೂಟಿಂಗ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮಹತ್ವದ ನಿಯಮಗಳನ್ನು ಜಾರಿಗೆ ತರುವ ನಿರ್ಧಾರ ಮಾಡಿದೆ. ಇನ್ಮುಂದೆ, ದೇವಸ್ಥಾನಗಳಲ್ಲಿ ಚಿತ್ರೀಕರಣ ಮಾಡಬೇಕಾದರೆ ಆಯ್ಕೆ ಮಾಡಿದ ಸ್ಥಳಗಳಲ್ಲಿ ಮಾತ್ರ ಅವಕಾಶ ದೊರೆಯಲಿದೆ ಮತ್ತು ಅದಕ್ಕಾಗಿ ಶುಲ್ಕ ಕಡ್ಡಾಯವಾಗಲಿದೆ.

ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಈ ಬಗ್ಗೆ ತಿಳಿಸಿದ್ದಾರೆ. ರಾಜ್ಯದ ಎಲ್ಲಾ ಎ ಮತ್ತು ಬಿ ವರ್ಗದ ಮುಜರಾಯಿ ದೇವಾಲಯಗಳಲ್ಲಿ ಈ ನಿಯಮ ಅನ್ವಯವಾಗಲಿದೆ. ಸಿನಿಮಾ, ಧಾರಾವಾಹಿ, ಸಾಕ್ಷ್ಯಚಿತ್ರ, ಯೂಟ್ಯೂಬ್ ಚಾನೆಲ್ ಹೀಗೆ ವಿವಿಧ ಪ್ರಕಾರದ ಚಿತ್ರೀಕರಣಕ್ಕೆ ಶೂಟಿಂಗ್ ಶುಲ್ಕ ಪಾವತಿಸುವುದು ಕಡ್ಡಾಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.ಹಿಂದೆ 2003 ಮತ್ತು 2013 ರಲ್ಲಿ ನಿಗದಿತ ಶುಲ್ಕ ಪಾವತಿಸಿ ಶೂಟಿಂಗ್ ಮಾಡಲು ನಿಯಮ ಜಾರಿಗೆ ಬಂದಿದೆ. ಆದರೆ ಇತ್ತೀಚೆಗೆ ದೇವಸ್ಥಾನಗಳಲ್ಲಿ ರೀಲ್ಸ್, ಯೂಟ್ಯೂಬ್ ಚಾನೆಲ್ ಚಿತ್ರೀಕರಣಗಳು ಹೆಚ್ಚಿದ ಪರಿಣಾಮ, ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ಬರುತ್ತಿದೆ. ಹೀಗಾಗಿ ಮುಜರಾಯಿ ಇಲಾಖೆ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಿದೆ.‘ಮುಖ್ಯ ಉದ್ದೇಶ ಹಣ ಸಂಗ್ರಹಿಸುವುದು ಅಲ್ಲ’: “ಯಾರೋ ಬಂದು ಏನೆನೋ ವಿಡಿಯೋ ಮಾಡುವುದನ್ನು ತಡೆಯಬೇಕು. ದೇವಸ್ಥಾನದಲ್ಲಿ ಶೂಟಿಂಗ್ ಮಾಡುವಾಗ ಅನುಮತಿ ಪಡೆಯುವುದು ಕಡ್ಡಾಯ” ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಅವರು ಹೇಳಿದ್ದಾರೆ, ಈ ನಿಯಮ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಯಾಗಿತ್ತು, ಈಗ ಅದನ್ನು ಮತ್ತಷ್ಟು ಬಿಗಿಯಾಗಿ ಅನುಸರಿಸಲು ಕಟ್ಟುನಿಟ್ಟಾಗಿ ಮಾಡಲಾಗುತ್ತಿದೆ.ದೇವಾಲಯಗಳಿಗೆ ಸಂಬಂಧಿಸಿದ ಆಸ್ತಿ ಕುರಿತು ವಿವರಿಸಿದ ಅವರು, ಸದ್ಯಕ್ಕೆ ನಮ್ಮ ಇಲಾಖೆಗೆ 40,000 ಪ್ರಾಪರ್ಟಿ ಸೇರಿವೆ. ಇದರಲ್ಲಿ 36,000 ಎಕರೆ ಜಮೀನು ಬಂದಿದೆ. ನಗರ ಪ್ರದೇಶದಲ್ಲಿ 4,000 ಪ್ರಾಪರ್ಟಿ ಇದೆ, ಅದರಲ್ಲಿ 17,000 ಎಕರೆ ದೇವಾಲಯ ಹೆಸರಿನಲ್ಲಿ ಬಂದಿದೆ. ಶೇಕಡಾ 50 ರಷ್ಟು ಸ್ಥಳ ಈಗಾಗಲೇ ದೇವಸ್ಥಾನಗಳಿಗೆ ಸೇರಿವೆ. 2023ಕ್ಕೂ ಮುಂಚೆ ಕೇವಲ 3,500 ಪ್ರಾಪರ್ಟಿ ಮಾತ್ರ ಇತ್ತು. ಮುಂದಿನ ವರ್ಷಗಳಲ್ಲಿ ಎಲ್ಲಾ ದೇವಸ್ಥಾನಗಳ ಜಾಗಗಳನ್ನು ಕೇವಲ ದೇವಸ್ಥಾನಕ್ಕೆ ಸಲ್ಲಿಸುವ ಯೋಜನೆ ಇದೆ ಎಂದು ಸಚಿವರು ಹೇಳಿದ್ದಾರೆ.

Exit mobile version