Site icon Ullalavani

ಯಶಸ್ವಿಯಾಗಿ ನಡೆದ ಸೆಂಟ್ ಜೋಸೆಫ್ ವಿ.ವಿ.ಯ ಪ್ರಥಮ `ರೂಟ್ಸ್ ಟು ವಿಂಗ್ಸ್’ ವಿದ್ಯಾರ್ಥಿವೇತನ ದಿನಾಚರಣೆ

ಬೆಂಗಳೂರು: ಸೆಂಟ್ ಜೋಸೆಫ್ ವಿಶ್ವವಿದ್ಯಾಲಯದ ಮೊಟ್ಟಮೊದಲ `ರೂಟ್ಸ್ ಟು ವಿಂಗ್ಸ್’ ವಿದ್ಯಾರ್ಥಿವೇತನ ದಿನಾಚರಣೆಯನ್ನು ವಿಶ್ವವಿದ್ಯಾಲಯದ ಮುಖ್ಯ ಸಭಾಂಗಣದಲ್ಲಿ ನಡೆಯಿತು.

ಶೈಕ್ಷಣಿಕ ಶ್ರೇಷ್ಠತೆ ಮತ್ತು ಶಿಕ್ಷಣದ ಪರಿವರ್ತಕ ಶಕ್ತಿಯನ್ನು ಆಚರಿಸುವ ಈ ಸಮಾರಂಭದಲ್ಲಿ ಆಡಳಿತ ಮಂಡಳಿ, ಅಧ್ಯಾಪಕರು ಮತ್ತು ಗಣ್ಯರು ಪಾಲ್ಗೊಂಡು ವಿದ್ಯಾರ್ಥಿವೇತನ ಪಡೆದವರನ್ನು ಗೌರವಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮರ್ಕ್ ಕೆಜಿಎಎ ಸಂಸ್ಥೆಯ ಆರ್ ಅಂಡ್ ಡಿ ವಿಭಾಗದ ಮುಖ್ಯಸ್ಥರಾದ ಡಾ. ಮಾರ್ಕಸ್ ಓಬ್ಕಿರ್ಚರ್ ಅವರು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಕಠಿಣ ಪರಿಶ್ರಮ ಮತ್ತು ತ್ಯಾಗದ ಪ್ರತೀಕವಾಗಿದ್ದಾರೆ ಎಂದು ಬಣ್ಣಿಸಿದರು.

ವಿದ್ಯಾರ್ಥಿವೇತನವು ವಿದ್ಯಾರ್ಥಿಗಳ ಮೇಲಿಟ್ಟಿರುವ ನಂಬಿಕೆಯಾಗಿದ್ದು, ಬುದ್ಧಿವಂತಿಕೆ ಮತ್ತು ಪ್ರಾಮಾಣಿಕತೆಯಿಂದ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಅವರು ಕರೆ ನೀಡಿದರು.

ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ರೆ.ಫಾದರ್ ಡಯೋನಿಶಿಯಸ್ ವಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೌಲ್ಯಾಧಾರಿತ ಶಿಕ್ಷಣದ ಮೂಲಕ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವುದು ಸಂಸ್ಥೆಯ ಧ್ಯೇಯವೆಂದು ತಿಳಿಸಿದರು. ಕುಲಪತಿಗಳಾದ ಡಾ. ಫಾದರ್ ವಿಕ್ಟರ್ ಲೋಬೋ ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿ, ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡಲು ಪ್ರೋತ್ಸಾಹಿಸಿದರು. ಕಾರ್ಯಕ್ರಮದ ಸಂಚಾಲಕರು ಹಾಗೂ ಹಣಕಾಸು ಅಧಿಕಾರಿಗಳಾದ ಫಾದರ್ ಅರುಣ್ ಪ್ರಶಾಂತ್ ಡಿಸೋಜಾ ಅವರು ವಂದನಾರ್ಪಣೆ ಸಲ್ಲಿಸಿದರು. ಈ ಕಾರ್ಯಕ್ರಮವು ಶೈಕ್ಷಣಿಕ ಗುಣಮಟ್ಟದೊಂದಿಗೆ ವ್ಯಕ್ತಿತ್ವ ವಿಕಸನಕ್ಕೂ ಒತ್ತು ನೀಡುವ ವಿಶ್ವವಿದ್ಯಾಲಯದ ಬದ್ಧತೆಯನ್ನು ಪುನರುಚ್ಚರಿಸಿತು.

ಈ ವಿಶೇಷ ದಿನದಂದು ವಿವಿಧ ವರ್ಗಗಳ ಅಡಿಯಲ್ಲಿ ಒಟ್ಟು 4,50,00,000 ರೂಪಾಯಿಗಳ ಬೃಹತ್ ಮೊತ್ತದ ವಿದ್ಯಾರ್ಥಿವೇತನವನ್ನು ಮಂಜೂರು ಮಾಡಲಾಯಿತು. ಇದರಲ್ಲಿ ಆರ್ಥಿಕ ನೆರವಿನ ಅಡಿಯಲ್ಲಿ 1,290 ವಿದ್ಯಾರ್ಥಿಗಳಿಗೆ 2,54,20,550 ರೂಪಾಯಿಗಳನ್ನು ಹಾಗೂ ಶೈಕ್ಷಣಿಕ ಶ್ರೇಷ್ಠತೆಯ ಅಡಿಯಲ್ಲಿ 760 ವಿದ್ಯಾರ್ಥಿಗಳಿಗೆ 1,80,79,450 ರೂಪಾಯಿಗಳನ್ನು ನೀಡಲಾಯಿತು.


ಅಲ್ಲದೆ, 50 ವಿದ್ಯಾರ್ಥಿಗಳಿಗೆ 15,00,000 ರೂಪಾಯಿಗಳ ಮ್ಯಾಜಿಸ್ ಮತ್ತು ವಿಶೇಷ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು. ಒಟ್ಟಾರೆಯಾಗಿ ವಿಶ್ವವಿದ್ಯಾಲಯದ ಈ ಯೋಜನೆಯಿಂದ 2,100 ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ.

Exit mobile version