Site icon Ullalavani

ಪಿಲಿಕುಳ: 4 ವರ್ಷದಲ್ಲಿ ಇಷ್ಟೊಂದು ಪ್ರಾಣಿಗಳ ಅಸಹಜ ಸಾವು…!

ಮಂಗಳೂರು ನಗರದ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 100ಕ್ಕೂ ಅಧಿಕ ಪ್ರಾಣಿಗಳು ಅಸಹಜವಾಗಿ ಸಾವನ್ನಪ್ಪಿದೆ .

. ಪ್ರಾಣಿಗಳಿಗೆ ನೀಡಲಾಗುತ್ತಿರುವ ಆಹಾರದಲ್ಲಿ ವಿಷಕಾರಿ ರಾಸಾಯನಿಕ ಮಿಶ್ರಿತಗೊಂಡಿರುವುದೇ ಇದಕ್ಕೆ ಕಾರಣವೆಂಬ ಆತಂಕಕಾರಿ ವಿಚಾರ ಬಯಲಾಗಿದೆ. ಹೌದು ಏಕಾಏಕಿ ಪ್ರಾಣಿಗಳ ಸಾವು, ವಿಷಕಾರಿ ಆಹಾರ ಪೂರೈಕೆ, ಪ್ರಾಣಿಗಳ ವಿನಿಮಯ ಹಗರಣ, ಲೆಕ್ಕಪತ್ರದಲ್ಲಿ ಅವ್ಯವಹಾರ, ದಾಖಲೆಗಳಲ್ಲಿ ವ್ಯತ್ಯಾಸ ಸೇರಿದಂತೆ ವಿವಿಧ ರೀತಿಯ ಹಗರಣಗಳಲ್ಲಿ ಪಿಲಿಕುಳ ಉದ್ಯಾನವನ ಸುದ್ದಿಯಾಗುತ್ತಿತ್ತು. ಸುಮಾರು ನಾಲ್ಕು ವರ್ಷಗಳಲ್ಲಿ ಹುಲಿ, ಜಿಂಕೆ, ಕಡವೆ, ಹಂದಿ ಸೇರಿದಂತೆ 100ಕ್ಕೂ ಅಧಿಕ ಪ್ರಾಣಿಗಳು ಮೃತಪಟ್ಟಿವೆ ಎನ್ನುವ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಪ್ರಾಣಿಗಳಿಗೆ ನೀಡುವ ಆಹಾರವನ್ನು ಪರಿಶೀಲಿಸಲು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

ವಿಷಕಾರಿ ರಾಸಾಯನಿಕ ಅಂಶ– 2026ರ ಫೆ.5ರಂದು ಉದ್ಯಾನವನದಲ್ಲಿ ಜಿಂಕೆಯೊಂದು ಮೃತಪಟ್ಟಿತ್ತು. ಅದರ ಮರಣೋತ್ತರ ಪರೀಕ್ಷೆ ನಡೆಸಿ ಹೊಟ್ಟೆಯಲ್ಲಿದ್ದ ಆಹಾರ ಮತ್ತು ಮಾಂಸದ ಮಾದರಿಯನ್ನು ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪರೀಕ್ಷಾ ವರದಿ ಹಿರಿಯ ಅಧಿಕಾರಿಗಳ ಕೈಸೇರಿದ್ದು ಪ್ರಾಣಿಯ ದೇಹದಲ್ಲಿ ಹೈಡೋ ಸೈನೇಡ್ ಮತ್ತು ನೈಟ್ರೇಟ್ ಎಂಬ ವಿಷಕಾರಿ ರಾಸಾಯನಿಕ ಅಂಶಗಳಿರುವುದು ಪತ್ತೆಯಾಗಿದೆ. ಪ್ರಾಣಿಗಳ ಸರಣಿ ಸಾವಿಗೆ ಇದು ಕೂಡ ಕಾರಣ ಎನ್ನಲಾಗುತ್ತಿದೆ.

ಪ್ರಾಣಿಗಳ ದೇಹದಲ್ಲಿ ವಿಷಕಾರಿ ಅಂಶ

ಸಾಮಾನ್ಯವಾಗಿ ಕ್ಯಾಬೇಜ್, ಕ್ಯಾಲಿಫ್ಲವರ್ ಬೆಳೆಯುವಾಗ ರೋಗ ಬಾಧೆಗೆ ಹೈಡೋ ಸೈನೇಡ್, ನೈಟ್ರೇಟ್ ಮಾದರಿಗಳನ್ನು ಸಿಂಪಡಿಸಲಾಗುತ್ತದೆ. ಆದರೆ ಪಿಲಿಕುಳ ಪ್ರಾಣಿ ಸಂಗ್ರಹಾಲಯದ ಪ್ರಾಣಿಗಳಿಗೆ ಕ್ಯಾಬೇಜ್, ಕಾಲಿಫ್ಲವರ್ ಎಲೆಗಳನ್ನು ಯಾವುದೇ ಮುಂಜಾಗ್ರತಾ ಕ್ರಮಕೈಗೊಳ್ಳದೆ, ಹಸಿಯಾಗಿಯೇ ನೀಡಲಾಗುತ್ತಿದೆ. ಇದನ್ನು ತಿಂದ ಪ್ರಾಣಿಗಳಿಗೆ ಸೈಡ್ ಎಫೆಕ್ಟ್ ಆಗುತ್ತಿದ್ದು ಅನಾರೋಗ್ಯಕ್ಕೀಡಾಗಿ ಸಾವನ್ನಪ್ಪಲು ಕಾರಣ ಆಗುತ್ತಿದೆಯಾ ಎಂಬ ಶಂಕೆ ಮೂಡಿದೆ. ಪಿಲಿಕುಳದ ಪ್ರಾಣಿಗಳ ದೇಹದಲ್ಲಿ ವಿಷಕಾರಿ ಅಂಶ ಪತ್ತೆಯಾಗುತ್ತಿದ್ದಂತೆ ಕ್ಯಾಬೇಜ್, ಕ್ಯಾಲಿಫ್ಲವರ್ ಎಲೆಗಳನ್ನು ಆಹಾರವನ್ನಾಗಿ ನೀಡುವುದಕ್ಕೆ ಅಧಿಕಾರಿಗಳು ನಿಷೇಧ ಹೇರಿದ್ದಾರೆ.

Exit mobile version