ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಅಧಿಕಾರಿಗಳು ನಾಗರೀಕರನ್ನು ಸರಿಯಾಗಿ ನಡೆಸಿಕೊಳ್ಳದಿದ್ದರೆ ಹಾಗೂ ಎಫ್‌ಐಆರ್ ದಾಖಲಿಸಲು ನಿರಾಕರಿಸಿದರೆ, ಅದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
Civil Appeal No. 6358/2025 ಪ್ರಕರಣದಲ್ಲಿ ತಮಿಳುನಾಡಿನ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ದೂರು ನೀಡಲು ಬಂದಿದ್ದ ವ್ಯಕ್ತಿಯ ತಾಯಿಯೊಂದಿಗೆ ಅಸಭ್ಯವಾಗಿ ವರ್ತಿಸಿ, ಎಫ್‌ಐಆರ್ ದಾಖಲಿಸಲು ನಿರಾಕರಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಮಾನವ ಹಕ್ಕುಗಳ ಆಯೋಗವು ಅಧಿಕಾರಿಯಿಂದ ₹2 ಲಕ್ಷ ದಂಡ ವಸೂಲಿ ಮಾಡಿ ದೂರುದಾರರಿಗೆ ನೀಡುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಇನ್ಸ್‌ಪೆಕ್ಟರ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಅಪರಾಧದ ವರದಿ ನೀಡಲು ಠಾಣೆಗೆ ಬರುವ ಪ್ರತಿಯೊಬ್ಬ ಪ್ರಜೆಯೂ ಮಾನವ ಘನತೆಯಿಂದ ನಡೆಸಿಕೊಳ್ಳಲ್ಪಡಲು ಅರ್ಹರು. ಅವರನ್ನು ಅಪರಾಧಿಗಳಂತೆ ಕಾಣುವುದು ಸಂವಿಧಾನದ 21ನೇ ವಿಧಿಯ ಉಲ್ಲಂಘನೆಯಾಗುತ್ತದೆ. ಹಿರಿಯ ಅಧಿಕಾರಿಯಾಗಿ ತಕ್ಷಣವೇ ಕ್ರಮ ಕೈಗೊಳ್ಳದೆ, ದೂರುದಾರರೊಂದಿಗೆ ಆಕ್ಷೇಪಾರ್ಹ ನುಡಿ ಬಳಸುವುದು ನಾಗರಿಕರ ಹಕ್ಕುಗಳ ದಮನವಾಗಿದೆ. ಸಂವಿಧಾನವು ಖಾತರಿಪಡಿಸಿದ ಜೀವನ, ಸ್ವಾತಂತ್ರ್ಯ ಮತ್ತು ಸಮಾನತೆಯ ಹಕ್ಕುಗಳೇ ಮಾನವ ಹಕ್ಕುಗಳಾಗಿವೆ.
ಪೊಲೀಸರು ಜನರ ದೂರು ಪಡೆಯಲು ನಿರಾಕರಿಸಿದರೆ ಹಾಗೂ ಅಸಭ್ಯವಾಗಿ ವರ್ತಿಸಿದರೆ ಸುಮ್ಮನೆ ಕೂರವುದು ಬೇಡ. ಈ ತೀರ್ಪಿನ ಆಧಾರದ ಮೇಲೆ ನೀವು ಮಾನವ ಹಕ್ಕುಗಳ ಆಯೋಗ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಬೇಕು. ಕಾನೂನಿನ ಮುಂದೆ ಎಲ್ಲರೂ ಸಮಾನರು.