Site icon Ullalavani

ಅಂಬ್ಲಮೊಗರು ಗ್ರಾ.ಪಂ. ಆಡಳಿತಾವಧಿಯ ಕೊನೆಯ ಗ್ರಾಮಸಭೆ

ಉಳ್ಳಾಲ: ಅಂಬ್ಲಮೊಗರು ಗ್ರಾಮ ಪಂಚಾಯಿತಿಯ ೨೦೨೫-೨೬ನೇ ಸಾಲಿನ ದ್ವಿತೀಯ ಹಂತದ ಹಾಗೂ ಜನಪ್ರತಿನಿಧಿಗಳ ಆಡಳಿತದ ಕೊನೆಯ ಗ್ರಾಮಸಭೆ ಸೋಮವಾರ ಗ್ರಾ.ಪಂ. ವಠಾರದಲ್ಲಿ ನಡೆಯಿತು.


ಸಭೆಯಲ್ಲಿ ಮಾತನಾಡಿದ ಇಬ್ರಾಹಿಂ ಮದಕ, ನಾಲ್ಕು ವರ್ಷಗಳಿಂದ ಕಂಡಿಲದಿಂದ ಲಕ್ಷ್ಮಿ ನರಸಿಂಹ ದೇವಸ್ಥಾನಕ್ಕೆ ಹೋಗಲು ರಸ್ತೆಯೇ ಇಲ್ಲ. ತಹಸೀಲ್ದಾರ್ ಈ ಬಗ್ಗೆ ಮೌನವಾಗಿದ್ದಾರೆ. ಸರ್ಕಾರಿ ಜಾಗದಲ್ಲಿ ಅಹೋರಾತ್ರಿ ಕೆಲಸ ನಡೆಯುತ್ತಿದ್ದು ಕಂದಾಯ ಇಲಾಖೆ ಮೌನವೇಕೆ? ಈಗಲೂ ಕೆಲಸ ನಡೆಯುತ್ತಿದ್ದು ತಕ್ಷಣ ನಿಲ್ಲಿಸಬೇಕು. ಮೈದಾನದ ಮೀಸಲು ಜಾಗ, ದೇವಸ್ಥಾನ ಸಂಪರ್ಕ ರಸ್ತೆ ಎಲ್ಲಿದೆ ಎಂದು ಪ್ರಶ್ನಿಸಿದರು.


ಜಾಗದ ಬಗ್ಗೆ ಪೂರ್ಣ ವಿವರ ಕಲೆ ಹಾಕಲಾಗಿದ್ದು ಸರ್ವೇ ಇಲಾಖೆ ಸ್ಪಷ್ಟ ವರದಿ ಕೊಡಬೇಕಿದೆ. ಖಾಸಗಿ ಜಾಗಕ್ಕೆ ಅಧಿಕಾರಿಗಳು ಹೋಗುವಂತಿಲ್ಲ, ಪಾವೂರಿನಲ್ಲಿ ಈಗಾಗಲೇ ಖಾಸಗಿ ಜಾಗದವರು ಕೇಸ್ ಹಾಕಿದ್ದಾರೆ. ಸರ್ಕಾರಿ ಜಾಗದಲ್ಲಿ ಕೆಲಸ ನಡೆಯುತ್ತಿದ್ದರೆ ನಿಲ್ಲಿಸುವುದಾಗಿ ಅಂಬ್ಲಮೊಗರು ಗ್ರಾಮ ಆಡಳಿತಗಾರೆ ನಯನ ತಿಳಿಸಿದರು.
ಯು.ಟಿ. ಫರೀದ್ ಹೆಸರಲ್ಲಿ ನಾಲ್ಕೂವರೆ ಎಕರೆ ಜಮೀನು ಮೈದಾನಕ್ಕೆ ಮೀಸಲಿಡಲಾಗಿದೆ. ಆದರೆ ಈಗಿರುವ ಜಾಗ ರಸ್ತೆಬದಿ ಇರುವುದರಿಂದ ಪಂಚಾಯಿತಿಗೆ ಆದಾಯ ಬರುವಂತಹ ಯೋಜನೆ ರೂಪಿಸುವ ನಿಟ್ಟಿನಲ್ಲಿ ಸ್ಪೀಕರ್ ಭರವಸೆ ಮೇರೆಗೆ ಕಾದಿರಿಸಲಾಗಿದೆ. ಒಳಭಾಗದಲ್ಲಿ ಜಾಗ ಸಿಗದಿದ್ದರೆ ಮೀಸಲು ಜಾಗದಲ್ಲೇ ಆಟದ ಮೈದಾನ ನಿರ್ಮಿಸಲಾಗುವುದು. ಸರ್ಕಾರಿ ಜಾಗಕ್ಕೆ ಖಾಸಗಿಯವರು ಮಣ್ಣು ಹಾಕಿದ್ದರೆ ಸರ್ವೇ ಮಾಡಿ ವಶಕ್ಕೆ ಪಡೆಯಲಾಗುವುದು ಎಂದು ಗ್ರಾ.ಪಂ. ಅಧ್ಯಕ್ಷ ಎಸ್.ಮಹಮ್ಮದ್ ಇಕ್ಬಾಲ್ ಭರವಸೆ ನೀಡಿದರು.


ನೀರು ಹರಿಯುವ ಮೋರಿ ಮುಚ್ಚಲಾಗಿದ್ದು ಕಲುಶಿತ ನೀರು ನಿಂತು ದುರ್ನಾತ ಬೀರುತ್ತಿದೆ ಎಂದು ಸ್ಥಳೀಯರು ದೂರಿದ್ದು, ಗ್ರಾಮಸ್ಥರ ಜೊತೆ ನಾವಿದ್ದು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಗ್ರಾಮಸ್ಥರ ಜೊತೆ ನಾವೂ ತಹಸೀಲ್ದಾರ್ ಬಳಿ ಚರ್ಚಿಸೋಣ ಎಂದು ಪಿಡಿಒ ಅಬ್ದುಲ್ ಖಾದರ್ ಐ ಹಾಗೂ ಮಾರ್ಗದರ್ಶಿ ಅಧಿಕಾರಿ ಎಚ್.ಆರ್.ಈಶ್ವರ್ ಭರವಸೆ ನೀಡಿ ಚರ್ಚೆ ಮುಕ್ತಾಯಗೊಳಿಸಿದರು.
ಅಂಬ್ಲಮೊಗರು ಪಶು ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ನಮ್ಮ ಮೂರು ದನಗಳು ಸತ್ತು ಹೋಗಿವೆ. ದನಗಳ ಆರೋಗ್ಯ ಹದಗೆಟ್ಟಾಗ ನಾವು ಕರೆ ಮಾಡಿದರೆ ಆಂಬ್ಯುಲೆನ್ಸ್ ಗೆ ಕರೆ ಮಾಡುವಂತೆ ಹೇಳುತ್ತಾರೆಂದು ಗ್ರಾಮಸ್ಥೆ ಜಮೀಲಾ ಎಂಬವರು ಅಳಲು ತೋಡಿಕೊಂಡರು
ಗ್ರಾಮದಲ್ಲಿ ದೊಡ್ಡ ಪಶು ಆಸ್ಪತ್ರೆ ಆಗಿದೆ, ವೈದ್ಯರಿಲ್ಲದೆ ಉದ್ಘಾಟನೆಗೆ ನಾವು ಅವಕಾಶ ಕೊಡದೆ ಬಹಿಷ್ಕರಿಸಿದ್ದೇವೆ. ದೂರುದಾರೆ ಹಾಲು ಮಾರಿ ಜೀವನ ಸಾಗಿಸುತ್ತಿದ್ದು, ದೂರು ಕೊಟ್ಟ ಬಳಿಕ ವೈದ್ಯರು ಬರಬೇಕು, ಇಲ್ಲವೇ ಆಗುವುದಿಲ್ಲ ಎಂದರೆ ಹೇಳಿದರೆ ನಾವು ಪರ್ಯಾಯ ವ್ಯವಸ್ಥೆ ಮಾಡುತ್ತೇವೆಂದು ಪಶುಸಖಿ ವಿದ್ಯಾ ಬಳಿ ಅಧ್ಯಕ್ಷ ಎಸ್. ಮಹಮ್ಮದ್ ಇಕ್ಬಾಲ್ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಇರುವುದರಿಂದ ಜನರು ಸೋಲಾರ್ ರೂಫ್ ಟಾಪ್ ಬಗ್ಗೆ ನಿರಾಸಕ್ತಿ ವಹಿಸಿದ್ದಾರೆ. ಹೊಸ ವಿದ್ಯುತ್ ಸಂಪರ್ಕ ಪಡೆಯುವವರಿಗೆ ಪ್ರೀಪೇಡ್ ಮತ್ತು ಪೋಸ್ಟ್ ಪೇಡ್ ಅವಕಾಶ ಇರುವ ಸ್ಮಾರ್ಟ್ ಮೀಟರ್ ಅಳವಡಿಸಲಾಗುತ್ತಿದೆ ಎಂದು ಮೆಸ್ಕಾಂ ಕಿರಿಯ ಅಭಿಯಂತರ ನಿತೇಶ್ ಹೊಸಗದ್ದೆ ತಿಳಿಸಿದರು.
ಸಂಜೆ ಶಾಲೆ ಬಿಟ್ಟ ಬಳಿಕ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಪೋಷಕರಿಗೆ ಕರೆ ಮಾಡಿ ಅರ್ಧ ಗಂಟೆ ಮಕ್ಕಳನ್ನು ಜೊತೆ ಕೂರಿಸಿ ಪಾಠ ಮಾಡುವ ’ಗಣಿತ ಗಣಕ’ ಈ ವರ್ಷದಿಂದ ಆರಂಭಗೊಂಡಿದೆ ಎಂದು ಅಂಬ್ಲಮೊಗರು ಶಾಲಾ ಮುಖ್ಯಶಿಕ್ಷಕ ಜಗದೀಶ್ ಶೆಟ್ಟಿ ಮನವಿ ಮಾಡಿದರು.


ಹಿಂದೆ ಎರಡು ಮಕ್ಕಳಿಗೆ ಮಾತ್ರ ಸಿಗುತ್ತಿದ್ದ ಭಾಗ್ಯಲಕ್ಷ್ಮಿ ಯೋಜನೆ ಈಗ ತ್ರಿವಳಿ ಮಕ್ಕಳಿಗೂ ನೀಡಲು ಸರ್ಕಾರ ಅವಕಾಶ ನೀಡಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶಂಕರಿ ಮಾಹಿತಿ ನೀಡಿದರು.
ಗ್ರಾ.ಪಂ. ಅಧ್ಯಕ್ಷ ಎಸ್.ಮಹಮ್ಮದ್ ಇಕ್ಬಾಲ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮಮ್ತಾಝ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್ ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶಂಕರಿ, ಮೆಸ್ಕಾಂ ಕಿರಿಯ ಅಭಿಯಂತರ ನಿತೇಶ್ ಹೊಸಗದ್ದೆ ಆರೋಗ್ಯ ಇಲಾಖೆಯಿಂದ ಜಯಂತಿ ಹಾಗೂ ಅರಣ್ಯ ಇಲಾಖೆ ಅಧಿಕಾರಿ ಭಾಗವಹಿಸಿದ್ದರು.


ಸಿಬಂದಿ ವಿಶ್ವನಾಥ ಹಿಂದಿನ ಗ್ರಾಮಸಭೆಯ ಅಜೆಂಡಾ ವಾಚಿಸಿದರು. ಪಿಡಿಒ ಅಬ್ದುಲ್ ಖಾದರ್ ಐ.ವಂದಿಸಿದರು.

Exit mobile version